ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿರುವ ಎಸ್ಐಟಿ ಮಹತ್ವದ ಮುನ್ನಡೆ ಲಭ್ಯವಾಗಿದೆ. ಪ್ರಜ್ವಲ್ ಗೆ ಸಂಬಂಧಿಸಿದ 10 ಪೆನ್ ಡ್ರೈವ್, 1 ಹಾರ್ಡ್ ಡಿಸ್ಕ್ ಪತ್ತೆ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ನಿನ್ನೆ ಹಲವು ಕಡೆ ದಾಳಿ ನಡೆಸಿತ್ತು. ಈ ವೇಳೆ ಇಷ್ಟೊಂದು ಪ್ರಮಾಣದಲ್ಲಿ ಪೆನ್ ಡ್ರೈವ್ ಮತ್ತು 1 ಹಾರ್ಡ್ ಡಿಸ್ಕ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ನಿನ್ನೆ ಸುಮಾರು 18 ಕಡೆ ಎಸ್ಐಟಿ ತಂಡ ದಾಳಿ ನಡೆಸಿತ್ತು. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಆಪ್ತರಾದ ಕ್ವಾಲಿಟಿ ಬಾರ್ ಶರತ್, ಪುನೀತ್, ಎಚ್.ಪಿ.ಕಿರಣ್, ಕಾಂಗ್ರೆಸ್ ಕಾರ್ಯಕರ್ತರಾದ ಪುಟ್ಟರಾಜು, ನವೀನ್‌ಗೌಡ, ಪ್ರಜ್ವಲ್ ರೇವಣ್ಣ ಮಾಜಿ ಕಾರುಚಾಲಕ ಕಾರ್ತಿಕ್, ಶಶಿ, ಚೇತನ್‌ಗೌಡ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು.
ಈ ವೇಳೆ ಇಷ್ಟೊಂದು ಪ್ರಮಾಣದಲ್ಲಿ ಪೆನ್ ಡ್ರೈವ್ ಪತ್ತೆಯಾಗಿದೆ. ಪ್ರಜ್ವಲ್ ವಿರುದ್ಧ ಸಾಕ್ಷ್ಯ ಕಲೆ ಹಾಕುತ್ತಿರುವ ಎಸ್ಐಟಿ ತಂಡಕ್ಕೆ ಈಗ ಮಹತ್ವದ ಸುಳಿವು ಸಿಕ್ಕಂತಾಗಿದೆ. ದಾಳಿ ವೇಳೆ ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಅಲ್ಲದೆ, ಮೊಬೈಲ್ ಫೋನ್ ಗಳನ್ನೂ ವಶಕ್ಕೆ ಪಡೆಯಲಾಗಿದೆ.
ಇದೆಲ್ಲಾ ಬೆಳವಣಿಗೆಗಳ ಮಧ್ಯೆ ಪ್ರಜ್ವಲ್ ಮಾತ್ರ ವಿದೇಶದಲ್ಲೇ ಉಳಿದುಕೊಂಡಿದ್ದು ಭಾರತಕ್ಕೆ ಬರದೇ ಎಸ್ಐಟಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಲೇ ಬಂದಿದ್ದಾರೆ. ನಿನ್ನೆಯೂ ವಿಮಾನ ಟಿಕೆಟ್ ರದ್ದು ಮಾಡಿ ನುಣುಚಿಕೊಂಡಿದ್ದರು. ಇದೀಗ ಅವರನ್ನು ಪತ್ತೆ ಮಾಡುವುದೇ ತನಿಖಾ ತಂಡಕ್ಕೆ ತಲೆನೋವಾಗಿದೆ.