ಬೆಂಗಳೂರು: ಚೀನಾದ ಡೇಂಜರಸ್ ಎಚ್ಎಂಪಿವಿ ವೈರಸ್ ಬೆಂಗಳೂರು ಸೇರಿದಂತೆ ಭಾರತಕ್ಕೆ ಕಾಲಿಟ್ಟ ಬೆನ್ನಲ್ಲೇ ಜನರಲ್ಲಿ ಲಾಕ್ ಡೌನ್ ಬಗ್ಗೆ ಭಯ ಶುರುವಾಗಿದೆ. ದೇವ್ರೇ ಇನ್ನೊಂದು ಲಾಕ್ ಡೌನ್ ಬೇಡ್ವೇ ಬೇಡ ಎನ್ನುತ್ತಿದ್ದಾರೆ.
ಸದ್ಯದ ವರದಿಗಳ ಪ್ರಕಾರ ಎಚ್ಎಂಪಿವಿ ವೈರಸ್ ಅಷ್ಟೊಂದು ಅಪಾಯಕಾರಿ ಅಲ್ಲ. ಹಾಗಿದ್ದರೂ ಮುನ್ನೆಚ್ಚರಿಕೆ ಅಗತ್ಯ ಎಂದು ಆರೋಗ್ಯ ಇಲಾಖೆ ಎಚ್ಚರಿಸುತ್ತಲೇ ಇರುತ್ತದೆ. ಇಂದು ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಲ್ಲಿ ಎಚ್ಎಂಪಿವಿ ವೈರಸ್ ಕೇಸ್ ಪತ್ತೆಯಾಗಿದೆ.
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಎಚ್ಎಂಪಿವಿ ವೈರಸ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಅದರಲ್ಲೂ ಕೆಲವರಿಗೆ ಮತ್ತೆ ಲಾಕ್ ಡೌನ್ ಆದರೆ ಎಂಬ ಭಯ ಶುರುವಾಗಿದೆ. ಕಳೆದ ಬಾರಿ ಕೊರೋನಾ ವೈರಸ್ ಬಂದಿದ್ದಾಗ ಲಾಕ್ ಡೌನ್ ಆದ ಕರಾಳ ಅನುಭವ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ.
ಕೊರೋನಾ ಬಂದು ಐದು ವರ್ಷವಾಗಿದ್ದು ಈ ನಡುವೆ ಎರಡು ವರ್ಷ ಸತತವಾಗಿ ಲಾಕ್ ಡೌನ್ ಆಗಿತ್ತು. ಎರಡು-ಮೂರು ತಿಂಗಳು ಮನೆಯಿಂದಲೇ ಕೆಲಸ, ಹೊರಗಡೆ ಸುತ್ತಾಡುವಂತಿಲ್ಲ ಎಂಬ ಸ್ಥಿತಿ ಎದುರಾಗಿತ್ತು. ಈಗ ಎಚ್ಎಂಪಿವಿ ವೈರಸ್ ಹಬ್ಬುತ್ತಿರುವ ಸುದ್ದಿ ತಿಳಿದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಜನ ದೇವ್ರೇ ಏನೇ ಆಗಲಿ ಮತ್ತೆ ಲಾಕ್ ಡೌನ್ ಆಗುವ ಪರಿಸ್ಥಿತಿ ಬಾರದೇ ಇರಲಿ. ರಾತ್ರೋ ರಾತ್ರಿ ಲಾಕ್ ಡೌನ್ ಎಂಬ ಘನಘೋರ ಘೋಷಣೆಯಾಗದಂತೆ ನೀನೇ ಕಾಪಾಡಪ್ಪ ದೇವರೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.