ಮೈಸೂರು: ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಸರಿಗಮಪ ಖ್ಯಾತಿಯ ಗಾಯಕ ಶ್ರೀಹರ್ಷ ಗಾಯನ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳಿಂದ ದಾಂಧಲೆ ನಡೆದಿದೆ. ಈ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದೆ.
ಗಾಯಕ ಶ್ರೀಹರ್ಷ ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಾಡುತ್ತಿದ್ದರು. ಈ ವೇಳೆ ಅವರು ಜಯತು ಜಯತು ಶ್ರೀರಾಮ ಹಾಡು ಹಾಡಿದ್ದಾರೆ. ಇದಕ್ಕೆ ಹಿಂದೂ ಯುವಕನೊಬ್ಬ ಧ್ವನಿಗೂಡಿಸಿದ್ದಾನೆ. ಆತನನ್ನು ಮುಸ್ಲಿಂ ಯುವಕರ ಗುಂಪು ಸುತ್ತುವರಿದು ಥಳಿಸಿದೆ. ಜೊತೆಗೆ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಈ ವಿಡಿಯೋ ಸಂಸದ ಪ್ರತಾಪ್ ಸಿಂಹ ಗಮನಕ್ಕೆ ಬಂದಿದ್ದು, ವಿಡಿಯೋ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ನಿನ್ನೆ ಗಾಯಕ ಶ್ರೀಹರ್ಷ ಜಯತು ಜಯತು ಶ್ರೀರಾಮ ಹಾಡು ಹಾಡಿದಾಗ ಕಾರ್ಯಕ್ರಮ ಹಾಳು ಮಾಡಿದ್ದಲ್ಲದೆ, ಹಿಂದೂ ಯುವಕನನ್ನು ಥಳಿಸಲಾಗಿದೆ. ಇದನ್ನೆಲ್ಲಾ ನೋಡಿಯೂ ಕೈಕಟ್ಟಿ ಕುಳಿತುಕೊಳ್ಳಬೇಕಾ? ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೆಲವು ದಿನಗಳ ಮೊದಲು ಮೋದಿ ಬಗ್ಗೆ ಹಾಡು ಮಾಡಿದ್ದ ವ್ಯಕ್ತಿಯ ಮೇಲೆ ಅನ್ಯಕೋಮಿನ ವ್ಯಕ್ತಿಗಳಿಂದ ಹಲ್ಲೆ ನಡೆದಿತ್ತು. ಇದೀಗ ಮೈಸೂರಿನಲ್ಲಿ ಮತ್ತೊಂದು ಅಂತಹದ್ದೇ ಘಟನೆ ನಡೆದಿದೆ.