ಬೆಂಗಳೂರು: ಇಂದು ವಿಶೇಷ ಅಧಿವೇಶನಕ್ಕೆ ಮುನ್ನ ಭಾಷಣ ಮಾಡಲು ಬಂದ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಸರ್ಕಾರ ಬರೆದುಕೊಟ್ಟ ಭಾಷಣ ಓದದೇ ತಮ್ಮದೇ ಭಾಷಣ ಮಾಡಿದ್ದು ಹೈಡ್ರಾಮಾಕ್ಕೆ ಕಾರಣವಾಗಿದೆ.
ನಿನ್ನೆಯೇ ಸರ್ಕಾರದ ಬರೆದುಕೊಟ್ಟಿದ್ದ ಭಾಷಣದಲ್ಲಿರುವ ಕೆಲವು ಅಂಶಗಳ ಬಗ್ಗೆ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಕಷಟು ವಿವಾದದ ಬಳಿಕ ಇಂದು ಕೊನೆಗೂ ರಾಜ್ಯಪಾಲರು ಸದನಕ್ಕೆ ಬಂದಿದ್ದಾರೆ.
ಆದರೆ ಸರ್ಕಾರ ಬರೆದುಕೊಟ್ಟ ಭಾಷಣ ಓದದೇ ಕೇವಲ ಎರಡೇ ನಿಮಿಷದಲ್ಲಿ ತಮ್ಮದೇ ಮಾತನಾಡಿ ನಿರ್ಗಮಿಸಿದ್ದಾರೆ. ಆದರೆ ರಾಜ್ಯಪಾಲರು ತಮ್ಮದೇ ಭಾಷಣ ಮಾಡಿದ್ದಕ್ಕೆ ಕಾಂಗ್ರೆಸ್ ಶಾಸಕರು ಸಿಟ್ಟಾಗಿದ್ದಾರೆ. ಬಿಕೆ ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ತಡೆಯುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ತಳ್ಳಾಟ, ನೂಕಾಟದಲ್ಲಿ ಬಿಕೆ ಹರಿಪ್ರಸಾದ್ ಬಟ್ಟೆ ಹರಿದಿದೆ.
ಈ ಗದ್ದಲದ ನಡುವೆ ರಾಜ್ಯಪಾಲರ ರಕ್ಷಣೆಗೆ ಅವರ ಭದ್ರತಾ ಸಿಬ್ಬಂದಿ ಸದನಕ್ಕೆ ನುಗ್ಗಿದ್ದಾರೆ. ಇನ್ನು ರಾಜ್ಯಪಾಲರ ನಡೆ ಖಂಡಿಸಿ ನಮ್ಮ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇತ್ತ ವಿಪಕ್ಷ ನಾಯಕ ಆರ್ ಅಶೋಕ್, ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರೇ ರಾಜ್ಯಪಾಲರ ಮೇಲೆ ಗೂಂಡಾಗಿರಿ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.