ಬೆಂಗಳೂರು: ಮನರೇಗಾ ಯೋಜನೆ ರದ್ದುಗೊಳಿಸಿದ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಆದರೆ ಈ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲು ಕೆಲವು ತಕರಾರು ತೆಗೆದಿದ್ದಾರೆ.
ರಾಜ್ಯಪಾಲರಿಗೆ ನಿನ್ನೆಯೇ ಭಾಷಣದ ಪ್ರತಿಯನ್ನು ಕಳುಹಿಸಿಕೊಡಲಾಗಿದೆ. ಆದರೆ ಇದರಲ್ಲಿ ಕೇಂದ್ರದ ವಿರುದ್ಧ ಇರುವ ಕೆಲವು ಅಂಶಗಳನ್ನು ತೆಗೆದು ಹಾಕುವಂತೆ ರಾಜ್ಯಪಾಲರು ಸೂಚಿಸಿದ್ದರು. ಇದು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷವಾಗಿ ಮಾರ್ಪಟ್ಟಿತ್ತು.
ಇದಾದ ಬಳಿಕ ಸರ್ಕಾರದ ಕೆಲವು ಸಚಿವರು ರಾಜ್ಯಪಾಲರ ಜೊತೆ ಮಾತುಕತೆಯನ್ನೂ ನಡೆಸಿವೆ. ಈ ವೇಳೆ 11 ಅಂಶಗಳನ್ನು ಭಾಷಣದಿಂದ ಕೈಬಿಡುವಂತೆ ಸೂಚಿಸಿದ್ದಾರೆ. ಒಂದು ವೇಳೆ ರಾಜ್ಯಪಾಲರು ಸದನಕ್ಕೆ ಬಾರದೇ ಇದ್ದಲ್ಲಿ ಕೋರ್ಟ್ ಮೆಟ್ಟಿಲೇರಲೂ ಸರ್ಕಾರ ಸಿದ್ಧತೆ ನಡೆಸಿತ್ತು.
ಇದರ ನಡುವೆ ಈಗ ರಾಜ್ಯಪಾಲರು ಸದನಕ್ಕೆ ಬರಲು ಒಪ್ಪಿದ್ದು ಭಾಷಣ ಮಾಡುವುದು ಖಚಿತವಾಗಿದೆ. ಆದರೆ ತಮಿಳುನಾಡು, ಕೇರಳ ಗವರ್ನರ್ ಮಾದರಿಯಲ್ಲಿ ಸಿದ್ಧಪಡಿಸಲಾಗಿರುವ ಭಾಷಣದಲ್ಲಿರುವ ಎಲ್ಲಾ ಅಂಶಗಳನ್ನು ಓದದೇ ಇರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.