Select Your Language

Notifications

webdunia
webdunia
webdunia
webdunia

30 ಗ್ರಾಮಗಳಲ್ಲಿ ಹೈ ಅಲರ್ಟ್!

30 ಗ್ರಾಮಗಳಲ್ಲಿ ಹೈ ಅಲರ್ಟ್!
ಗದಗ , ಭಾನುವಾರ, 25 ಜುಲೈ 2021 (09:53 IST)
ಗದಗ: ನವಿಲು ತೀರ್ಥ ಡ್ಯಾಂ ನಿಂದ ಮಲಪ್ರಭಾ ನದಿಗೆ ಸುಮಾರು 18 ಸಾವಿರ ಕ್ಯೂಸಕ್ಸ್ ನೀರು ಹರಿಬಿಡಲಾಗಿದೆ. ಇದರಿಂದ ಗದಗ ಜಿಲ್ಲೆಯ ಒಟ್ಟು 30 ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದ್ದು, ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪುರ ಗ್ರಾಮದ ಜನರ ಗೋಳು ಇಂದು ನಿನ್ನೆಯದಲ್ಲ, ದಶಕಗಳಿಂದ ಇವರದು ಇದೇ ಸಮಸ್ಯೆ. ಮಲಪ್ರಭಾ ನದಿಗೆ ಹೊಂದಿಕೊಂಡಂತೆ ಇರುವ ಈ ಗ್ರಾಮ ಪ್ರತಿವರ್ಷ ನಡುಗಡ್ಡೆಯಾಗಿ ಬೇರೆ ಊರುಗಳ ಸಂಪರ್ಕ ಕಳೆದುಕೊಂಡುಬಿಡುತ್ತದೆ. ಈ ಬಾರಿಯೂ ಸಹ ಇದೇ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಪ್ರವಾಹದ ಹಿನ್ನೆಲೆಯಲ್ಲಿ ಗ್ರಾಮಸ್ಥರನ್ನ ಸ್ಥಳಾಂತರ ಮಾಡಲು ಹರಸಾಹಸ ಪಡುತ್ತಿದ್ದಾರೆ. ಶನಿವಾರದಂದು ನದಿಗೆ 18 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ನೀರು ಗ್ರಾಮದ ಸುತ್ತ  ಸಂಪೂರ್ಣ ಆವರಿಸಿಕೊಂಡಿದೆ. ಇದರಿಂದ ಇಡೀ ಗ್ರಾಮವನ್ನ ಬೆಳ್ಳೇರಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಇನ್ನು ಗ್ರಾಮಸ್ಥರು ಗಂಟುಮೂಟೆ ಕಟ್ಟಿಕೊಂಡು ಜನ ಜಾನುವಾರಗಳ ಜೊತೆಗೆ ಊರು ಬಿಡುವ ದೃಶ್ಯ ಮನಕಲುಕುವಂತಿತ್ತು. ಓರ್ವ ಮಹಿಳೆ ನನ್ನ ಮಗಳಿಗೆ ಕಣ್ಣಿಲ್ಲ ಹುಟ್ಟು ಕುರುಡು. ಈಗ ಊರು ಬಿಡಿ ಅಂತಿದ್ದಾರೆ. ಆದ್ರೆ ಕಣ್ಣಿಲ್ಲದ ಮಗಳನ್ನ ಹೇಗೆ ಕರೆದುಕೊಂಡು ಹೋಗಬೇಕು ಅಂತ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.
ಇನ್ನು ಈ ಗ್ರಾಮವು ಗದಗ ಜಿಲ್ಲೆಯ ಗಡಿಯಲ್ಲಿದೆ. ಬಹುತೇಕ ಬೆಳಗಾವಿ ಜಿಲ್ಲೆಯ ಸರಹದ್ದಿನಲ್ಲಿದೆ. ಜಿಲ್ಲಾಡಳಿತ ಈಗಾಗಲೇ ಇವರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಬೆಳ್ಳೇರಿ ಗ್ರಾಮದ ಬಳಿ ಜಾಗ ಗುರುತಿಸಿ ಮನೆ ಕಟ್ಟಿಸಲು ಮುಂದಾಗಿತ್ತು. ಆದರೆ ಸರಕಾರ ಗುರುತಿಸಿರುವ ಜಾಗ ಬಹಳ ದೂರ ಇರುವ ಕಾರಣ ತಮ್ಮ ಜಮೀನು ದೂರ ಆಗುತ್ತದೆ. ಹೀಗಾಗಿ ನಾವು ಅಲ್ಲಿಗೆ ಹೋಗೋದಿಲ್ಲ. ಬದಲಾಗಿ ನಮ್ಮ ಗ್ರಾಮಕ್ಕೆ ಹತ್ತಿರವಾಗುವಂತೆ ಬೆಳಗಾವಿ ಜಿಲ್ಲೆಗೆ ಸೇರಿದ ಎತ್ತರ ಪ್ರದೇಶದ ಜಾಗದಲ್ಲಿಯೇ ಮನೆ ನಿರ್ಮಿಸಿ ಕೊಡಿ ಅಂತಿದ್ದಾರೆ. ಆದರೆ ಇವೆಲ್ಲಾ ಎರಡು ಜಿಲ್ಲೆಯ ಜಿಲ್ಲಾಡಳಿತ ಮತ್ತು ರಾಜಕಾರಣಿಗಳ ಮುತುವರ್ಜಿಯಿಂದ ಈ ಕೆಲಸ ಆಗಬೇಕಿದೆ. ಸದ್ಯ ಈ ಗ್ರಾಮಸ್ಥರು ಕೇಳುವ ಬೇಡಿಕೆಯನ್ನ ಈಡೇರಿಸಲು ಗದಗ ಜಿಲ್ಲಾಡಳಿತ ಮುಂದಾಗುತ್ತಿಲ್ಲ. ಇದರಿಂದ ಹಾವು ಸಾಯ್ತಿಲ್ಲ ಕೋಲು ಮುರಿತಿಲ್ಲ ಅನ್ನೋ ಹಾಗೆ ಆಗಿದೆ ಇವರ ಪರಿಸ್ಥಿತಿ.
ಸದ್ಯ ಇಡೀ ಗ್ರಾಮಸ್ಥರನ್ನ ಸ್ಥಳಾಂತರ ಮಾಡಲಾಗಿದೆ. ಮಕ್ಕಳು ಮರಿ ಏನನ್ನೂ ಬಿಡದೇ ಮನೆಗೆ ಬೀಗ ಹಾಕಿಕೊಂಡು ಲಖಮಾಪುರ ಜನರು ಈಗ ಪರಿಹಾರ ಕೇಂದ್ರದಲ್ಲಿ ಇದ್ದಾರೆ. ಆದರೆ ಯಾವುದಾದರೂ ಒಂದು ಆಯ್ಕೆ ಮಾಡಿಕೊಂಡು ಮುಂದಿನ ಜೀವನದ ದೃಷ್ಟಿಯಿಂದ ಗ್ರಾಮಸ್ಥರು ಸರಕಾರಕ್ಕೆ ಸಹಕರಿಸಬೇಕಾಗಿದೆ. ಇಲ್ಲ ಸರಕಾರವಾದರೂ ತನ್ನ ಹಠ ಬಿಟ್ಟು ಇವರ ಬೇಡಿಕೆಯಂತಾದರೂ ನಡೆದುಕೊಳ್ಳಬೇಕಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಕಿನ್ಸನ್ ರೋಗಿಗಳ ಪ್ರಮಾಣ 2030 ರ ವೇಳೆಗೆ ಹೆಚ್ಚಳ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್