ಚೆನ್ನೈ; ಬೆಂಗಳೂರಿನ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಕರ್ನಾಟಕ ಸರ್ಕಾರ ಆರಂಭಿಸಿರುವ ಮೇಕೆದಾಟು ಯೋಜನೆ ಇದೀಗ ತಮಿಳುನಾಡು-ಕರ್ನಾಟಕದ ನಡುವೆ ಬಿಸಿ ವಾತಾವರಣವನ್ನು ನಿರ್ಮಿಸಿದೆ.
ಮೇಕೆದಾಟು ಯೋಜನೆ ಯ ವಿರುದ್ಧ ತಮಿಳುನಾಡು ಸರ್ಕಾರ ಸರ್ವಪಕ್ಷ ಸಭೆ ನಡೆಸಿ 3 ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡ ಬೆನ್ನಿಗೆ, ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ "ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ಯಿಂದ ಹಿಂದೆ ಸರಿಯುವುದಿಲ್ಲ" ಎಂದು ಹೇಳಿಕೆ ನೀಡಿದ್ದರು. ಆದರೆ, ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿರುವ ತಮಿಳುನಾಡು ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್, "ಕಾವೇರಿ ನ್ಯಾಯಮಂಡಳಿ ಮತ್ತು ಸುಪ್ರೀಂ ತೀರ್ಪಿನ ವಿರುದ್ಧ ಅಣೆಕಟ್ಟು ನಿರ್ಮಿಸುವುದಾಗಿ ಹೇಳುವ ಹಕ್ಕು ಕರ್ನಾಟಕಕ್ಕೆ ಇದ್ದರೆ, ಕಾನೂನು ಮಾರ್ಗದ ಮೂಲಕ ಯೋಜನೆಯನ್ನು ಸ್ಥಗಿತಗೊಳಿಸಲು ಹಕ್ಕು ನಮಗೂ ಇದೆ" ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.
ಕಳೆದ ಸೋಮವಾರ ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ ಕರೆದಿದ್ದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಮೆಕೆಡಾಟು ಯೋಜನೆಗೆ ಅನುಮತಿ ನೀಡಬಾರದೆಂದು ಕೇಂದ್ರವನ್ನು ಒತ್ತಾಯಿಸಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಆದರೆ, ಈ ಬಗ್ಗೆ ಕಟು ಹೇಳಿಕೆ ನೀಡಿದ್ದ ಸಚಿವ ಬಸವರಾಜ ಬೊಮ್ಮಾಯಿ, "ಕರ್ನಾಟಕದ ಜನರ ಹಿತಾಸಕ್ತಿಯನ್ನು ಕಾಪಾಡುವ ಹಕ್ಕು ಕರ್ನಾಟಕ ಸರ್ಕಾರಕ್ಕಿದೆ. ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವುದು ಜನರ ಹಿತಾಸಕ್ತಿ ವಿಚಾರವಾಗಿದ್ದು, ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆಯನ್ನು ಕೈಗೊಳ್ಳಲಾಗಿದೆ. ಹೀಗಾಗಿ ಈ ಯೋಜನೆಯಿಂದ ಕರ್ನಾಟಕ ಹಿಂದೆ ಸರಿಯುವ ಮಾತೇ ಇಲ್ಲ" ಎಂದು ತಿಳಿಸಿದ್ದರು.
ಅಲ್ಲದೆ, "ಕರ್ನಾಟಕದ ಮೇಕೆದಾಟು ಯೋಜನೆಯ ಸಂಪೂರ್ಣ ವರದಿಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಅಲ್ಲದೆ, ಈ ವರದಿಯು ಕೇಂದ್ರ ಜಲ ಆಯೋಗಕ್ಕೂ ಸಲ್ಲಿಸಲಾಗಿದೆ. ಹೀಗಾಗಿ ಕರ್ನಾಟಕದ ಮನವಿಯನ್ನು ಕಾನೂನಿನ ಪ್ರಕಾರ ಭಾರತ ಸರ್ಕಾರ ಪರಿಗಣಿಸಬೇಕಾಗಿದೆ" ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಆದರೆ, ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿರುವ ದೊರೈ ಮುರುಗನ್, "ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಈ ಪರಿಸ್ಥಿತಿಯಲ್ಲಿ, ತಮಿಳುನಾಡಿನ ಕಡೆಗೆ ಹರಿಯುವ ನೀರಿನ ಹಾದಿಯನ್ನು ತಡೆಯುವ ಅಣೆಕಟ್ಟು ನಿರ್ಮಿಸುವುದಾಗಿ ಹೇಳುವ ಮೂಲಕ ಕರ್ನಾಟಕ ಸರ್ಕಾರ ಉನ್ನತ ನ್ಯಾಯಾಲಯದ ತೀರ್ಪನ್ನು ಕಡೆಗಣಿಸುತ್ತಿದೆ. ಇದಲ್ಲದೆ, ಕರ್ನಾಟ ಸಚಿವರು ಕಾವೇರಿ ಟ್ರಿಬ್ಯೂನಲ್ ಮತ್ತು ಸುಪ್ರೀಂ ಕೋರ್ಟ್ನ ತೀರ್ಪುಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಆಶ್ಚರ್ಯವಾಗುತ್ತಿದೆ. ಕರ್ನಾಟಕದ ವರ್ತನೆಯು ರಾಷ್ಟ್ರೀಯ ಪ್ರತಿಪಾದನೆಯಾಗಿ ರಾಜ್ಯವು ನದಿಯ ಮೇಲೆ ಮಾಲೀಕತ್ವವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ ಹೇಳಿಕೆಯ ಸ್ಪಷ್ಟ ಉಲ್ಲಂಘನೆ" ಎಂದು ಕಿಡಿಕಾರಿದ್ದಾರೆ.
"ಇದು ಪ್ರಜಾಪ್ರಭುತ್ವ ದೇಶ. ಕರ್ನಾಟಕದಲ್ಲಿ ಇಂತಹ ಪ್ರವೃತ್ತಿಗಳು ಬೆಳೆಯುತ್ತಿರುವಾಗ ಕೇಂದ್ರ ಸರ್ಕಾರ ಪ್ರೇಕ್ಷಕರಾಗಿ ಉಳಿಯುವುದು ಸರಿಯಲ್ಲ. ನೆರೆಯ ರಾಜ್ಯಗಳ ನಡುವಿನ ಆರೋಗ್ಯಕರ ಸಂಬಂಧಕ್ಕೆ ಇದು ಒಳ್ಳೆಯದಲ್ಲ” ಎಂದು ತಮಿಳುನಾಡು ಸಚಿವ ದೊರೈ ಮುರುಗನ್ ತಿಳಿಸಿದ್ದಾರೆ