ಹಂಪಿ: ಕರ್ನಾಟಕ ಐತಿಹಾಸಿಕ ಪ್ರವಾಸೀ ತಾಣ ಹಂಪಿಯಲ್ಲಿ ನಾಗರಿಕ ಸಮಾಜವೇ ತಲತಗ್ಗಿಸುವ ಘಟನೆಯೊಂದು ನಡೆದಿದೆ. ಪ್ರವಾಸಕ್ಕೆಂದು ಬಂದಿದ್ದ ಓರ್ವ ಇಸ್ರೇಲ್ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ.
ವಿಪರ್ಯಾಸವೆಂದರೆ ಈ ಮಹಿಳೆಯರ ಜೊತೆ ಮೂವರು ಪುರುಷ ಪ್ರವಾಸಿಗರೂ ಇದ್ದರು. ಆದರೆ ಅವರನ್ನು ಕಾಲುವೆಗೆ ತಳ್ಳಿದ ದುಷ್ಕರ್ಮಿಗಳು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ. ಆರೋಪಿಗಳು ಸುಮಾರು 20 ರ ಹರೆಯದವರಾಗಿದ್ದು ಕನ್ನಡ ಮತ್ತು ತೆಲುಗು ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯ ವಿವರ
ಇಸ್ರೇಲ್ ಮಹಿಳೆ ಸೇರಿದಂತೆ ಇತರೆ ಪ್ರವಾಸಿಗರ ಗುಂಪು ಮೊನ್ನೆ ರಾತ್ರಿ ಹಂಪಿ ಸಣಾಪುರ ಸರೋವರ ಬಳಿ ನಕ್ಷತ್ರ ವೀಕ್ಷಣೆಯಲ್ಲಿ ತೊಡಗಿಕೊಂಡಿತ್ತು. ರಾತ್ರಿ ಸುಮಾರು 11 ಗಂಟೆಗೆ ಮೂವರು ಬೈಕ್ ನಲ್ಲಿ ಬಂದು ಇಲ್ಲಿ ಪೆಟ್ರೋಲ್ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದರು.
ಈ ವೇಳೆ ಹೋಂ ಸ್ಟೇ ನಿರ್ವಾಹಕಿ ಹತ್ತಿರದಲ್ಲಿ ಪೆಟ್ರೋಲ್ ಬಂಕ್ ಇಲ್ಲ ಎಂದಿದ್ದಾಳೆ. ಆಗ ದುಷ್ಕರ್ಮಿಗಳು 100 ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ನೀಡಲು ನಿರ್ವಾಹಕಿ ಒಪ್ಪದೇ ಹೋದಾಗ ಎಲ್ಲರ ಮೇಲೂ ಹಲ್ಲೆ ನಡೆಸಿದ್ದಾರೆ.
ತಡೆಯಲು ಬಂದ ಪುರುಷ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ಕಾಲುವೆಗೆ ತಳ್ಳಿದ್ದಾರೆ. ಬಳಿಕ ಅಲ್ಲಿದ್ದ ಓರ್ವ ಇಸ್ರೇಲ್ ಮಹಿಳೆ ಮತ್ತು ನಿರ್ವಾಹಕಿ ಮೇಲೆ ಅತ್ಯಾಚಾರವೆಸಗಿ ಎಸ್ಕೇಪ್ ಆಗಿದ್ದಾರೆ. ಕಾಲುವೆಗೆ ಬಿದ್ದಿದ್ದ ಪುರುಷ ಪ್ರವಾಸಿಗರ ಪೈಕಿ ಇಬ್ಬರು ಕಷ್ಟಪಟ್ಟು ಈಜಿ ದಡ ಸೇರಿದ್ದಾರೆ. ಉಳಿದ ಒಬ್ಬಾತನ ಮೃತದೇಹ ಪತ್ತೆಯಾಗಿದೆ. ಸಾವನ್ನಪ್ಪಿದ ವ್ಯಕ್ತಿ ಒಡಿಶಾ ಮೂಲದವರು ಎಂದು ತಿಳಿದುಬಂದಿದೆ. ಪೊಲೀಸರು ಈಗ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.