ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನಾಗುವ ಆಸೆ ನನಗೇನೂ ಇರಲಿಲ್ಲ. ಆಸೆ ತೋರಿಸಿ, ಏನನ್ನೂ ಹೇಳದೆಯೇ ನನ್ನ ಹೆಸರನ್ನು ಕೈಬಿಡಲಾಯಿತು. ಪಕ್ಷದ ಸಮಿತಿಯಿಂದ ನನ್ನನ್ನು ಕೈಬಿಡಲಾಗಿದೆ. ಯಾವ ಸಮಿತಿಯಲ್ಲೂ ನಾನಿಲ್ಲ. ಹೀಗಾಗಿ ನಾನು ಪಕ್ಷದ ಕಚೇರಿಗೆ ಹೋಗುವುದಿಲ್ಲ, ಕ್ಷೇತ್ರದಲ್ಲೇ ಇದ್ದು ಜನರ ಕೆಲಸ ಮಾಡುತ್ತೇನೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಯಾವ ವಿಚಾರ ಸಂಬಂಧ ನನ್ನ ಹೆಸರನ್ನು ಕೈಬಿಡಲಾಯಿತು ಎಂದು ಕುಮಾರಸ್ವಾಮಿ ಇದುವರೆಗೂ ಹೇಳಿಲ್ಲ. ಅಂದಿನಿಂದ ನನ್ನ ಪಾಡಿಗೆ ನಾನು, ಅವರ ಪಾಡಿಗೆ ಅವರು ಇದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಿದವರು ಅವರಿಗೆ ಬೇಡವಾಗಿದೆ. ಬದಲಿಗೆ ಚಾಡಿ ಹೇಳುವವರು ಅವರಿಗೆ ಪ್ರಿಯವಾಗುತ್ತಾರೆ ಎಂದು ಹೇಳಿದರು.
ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರನ್ನು ಹೊಗಳುವ ಸಂದರ್ಭದಲ್ಲಿ ಹೊಗಳಿ, ತೆಗಳುವಾಗ ತೆಗಳಬೇಕು. ಸಿದ್ದರಾಮಯ್ಯ ಅವರ ಜೊತೆ 25 ವರ್ಷ ಕೆಲಸ ಮಾಡಿದ್ದೆ. ಅವರ ವಿರುದ್ಧ ಹೋರಾಡುವ ಹೊಣೆಯನ್ನು ಪಕ್ಷ ನೀಡಿದಾಗ, ಹೋರಾಡಿದೆ. ಆಗಿನ ನನ್ನ ನಿಷ್ಠೆ ಪಕ್ಷದ ನಾಯಕರಿಗೆ ಕಾಣಲಿಲ್ಲವೇ ಪ್ರಶ್ನೆ ಹಾಕಿದರು.