ಮೈಸೂರು: ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವ ಸಂದರ್ಭ ಬಂದಲ್ಲಿ ತಮಗೆ ಬೆಂಬಲ ನೀಡುವ ದೃಷ್ಟಿಯಿಂದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯನ್ನು ಸಚಿವ ಸತೀಶ್ ಜಾರಕಿಹೊಳಿ ಭೇಟಿಯಗಿರುಬಹುದು ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆಗುವ ಅವಕಾಶ ಸಿಕ್ಕದರೆ ಜೆಡಿಎಸ್ನ 18 ಶಾಸಕರ ಬೆಂಬಲ ನೀಡಬೇಕು ಎಂದು ಸತೀಶ್ ಜಾರಕಿಹೊಳಿ ಕೇಳಿರಬಹುದು. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅವರು ಬೇರೆ ಕಾರಣಕ್ಕೆ ಕುಮಾರಸ್ವಾಮಿಯವರನ್ನು ಭೇಟಿ ಮಾಡಿರಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಜಾರಕಿಹೊಳಿಯವರು ಮಾಜಿ ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದರೆ ಅದಕ್ಕೆ ಇದೇ ಕಾರಣ. ಒಂದು ವೇಳೆ ಜೆಡಿಎಸ್ ಅವರಿಗೆ ಬೆಂಬಲ ನೀಡಿದರೂ ನಾನು ಈ ವಿಚಾರದಲ್ಲಿ ತಟಸ್ಥನಾಗಿರುತ್ತೇನೆಂದು ಮಾರ್ಮಿಕವಾಗಿ ನುಡಿದರು.
ಇನ್ನೂ ಶಾಸಕ ಬಸನಗೌಡ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಅದು ಬಿಜೆಪಿಯ ಆಂತರಿಕ ವಿಷಯ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಮುಂದೆ ಇನ್ನೂ ಏನೇನು ಬೆಳವಣಿಗೆ ಆಗುತ್ತೆ ಕಾದು ನೋಡೋಣ ಎಂದು ತಿಳಿಸಿದರು.