ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಬಲ ತಂದುಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇನ್ನು ಮುಂದೆ ಪ್ರತೀ ವರ್ಷವೂ ಟಿಕೆಟ್ ದರ ಪರಿಷ್ಕರಣೆಗೆ ನಿರ್ಧರಿಸಿದ್ದು ಜನತೆಗೆ ಇದು ಮತ್ತೊಂದು ಶಾಕ್ ಆಗಿರಲಿದೆ.
ವಿದ್ಯುತ್ ದರದಂತೆ ಇನ್ನು ಮುಂದೆ ಬಸ್ ಟಿಕೆಟ್ ದರವೂ ಪ್ರತೀ ವರ್ಷವೂ ಪರಿಷ್ಕರಣೆಯಾಗಲಿದೆ. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚನೆಯಾಗಲಿದೆ. ಸಾರ್ವಜನಿಕ ಸಾರಿಗೆ ದರ ಪರಿಷ್ಕರಣೆಗೆ ಸಮಿತಿ ರಚನೆಯಾಗುತ್ತಿರುವುದು ಇದೇ ಮೊದಲು.
ಈ ಸಮಿತಿಯಲ್ಲಿ ಒಬ್ಬರು ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರಿರುತ್ತಾರೆ. ಸಾರಿಗೆ ನಿಗಮಳ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಈ ಸಮಿತಿ ಪ್ರತೀ ವರ್ಷ ದರ ಪರಿಷ್ಕರಣೆಗೆ ಶಿಫಾರಸ್ಸು ಮಾಡಲಿದೆ. ಅದರಂತೆ ಟಿಕೆಟ್ ದರವೂ ಪ್ರತೀ ವರ್ಷ ಪರಿಷ್ಕರಣೆಯಾಗಲಿದೆ.
ಈ ಸಮಿತಿ ಮಾಡಿದ ಶಿಫಾರಸ್ಸುಗಳ ಅನ್ವಯ ರಾಜ್ಯ ಸರ್ಕಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಿದೆ. ಅದರಂತೆ ದರ ಪರಿಷ್ಕರಣೆಯಾಗಲಿದೆ. ಸಾರಿಗೆ ಇಲಾಖೆಯ ಪರಿಸ್ಥಿತಿ ಸುಧಾರಣೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.