ಬಾಗಲಕೋಟೆ : ಆರ್ಎಸ್ಎಸ್ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಜೆಡಿಎಸ್ ಆಗಲಿ ಬೇರೆಯವರಾಗಲಿ ಚುನಾವಣೆಯಲ್ಲಿ ಎದುರಿಸಬೇಕಿರುವುದು ಬಿಜೆಪಿಯನ್ನ ಹೊರತು ಆರ್ಎಸ್ಎಸ್ ಅಲ್ಲ. ಹೀಗಾಗಿ ವಿನಾಕಾರಣ ಸಂಘಟನೆಯನ್ನು ಚರ್ಚೆಗೆ ಎಳೆಯಬೇಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಆರ್ಎಸ್ಎಸ್ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ, ಧರ್ಮ ರಕ್ಷಣೆ'ಯ ಉದ್ದೇಶ ಹೊಂದಿದೆ ಎಂದರು.
'ದೇವೆಗೌಡರು ಪ್ರಧಾನಿ ಆಗಿದ್ದಾಗ ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಇನ್ನಷ್ಟು ದಿನ ಅವರ ಕೈಯಲ್ಲಿ ಆಡಳಿತವಿದ್ದಿದ್ದರೆ ಕಾಶ್ಮೀರ ಪಾಕಿಸ್ತಾನದ ಪಾಲಾಗುತ್ತಿತ್ತು' ಎಂದು ವ್ಯಂಗ್ಯವಾಡಿದರು.
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ ದೇಶ ಅಖಂಡ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲಿನ ಬಡವರು, ಪರಿಶಿಷ್ಟರಿಗೆ ಮೀಸಲಾತಿ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.
ಸಿಂದಗಿ, ಹಾನಗಲ್ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಭಾವನಾತ್ಮಕ ವಿಷಯಗಳನ್ನು ಮುಂದೆ ತರುತ್ತಿವೆ. ನಾವು ಅಭಿವೃದ್ಧಿ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಆರ್ಎಸ್ಎಸ್ ದೇಶಭಕ್ತಿ ಬಗ್ಗೆ ಹೇಳುತ್ತದೆ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಸಂತರಾಗಿರುವವರು, ಶರಣರಾಗಿರುವವರು ಕೇಶವ ಕೃಪಾದಲ್ಲಿ ಇದ್ದಾರೆ. ಹೀಗಾಗಿ ಆರ್ಎಸ್ಎಸ್ ಬಗ್ಗೆ ಮಾತನಾಡದಂತೆ ಎಚ್ಚರಿಕೆ ಕೊಡುತ್ತೇನೆ ಎಂದರು.