Publish Date: Sat, 09 Oct 2021 (14:14 IST)
Updated Date: Sat, 09 Oct 2021 (12:44 IST)
ಮೈಸೂರು : ಎರಡೂ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಹಾಗೆಂದು, ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆ ದಿಕ್ಸೂಚಿ ಅಂತ ಹೇಳುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಆದರೆ, ಈ ಫಲಿತಾಂಶದಿಂದ ಸರ್ಕಾರದ ಮೇಲೆ ಜನರ ಅಭಿಪ್ರಾಯ ಏನು ಎಂಬುದು ಗೊತ್ತಾಗುತ್ತದೆ. ಜನರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬೇಸರಗೊಂಡಿದ್ದಾರೆ. ಹೀಗಾಗಿ ಜನರು ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸುತ್ತಾರೆ ಎಂದು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಜೆಡಿಎಸ್ನವರು ಒಳ್ಳೆಯ ಉದ್ದೇಶದಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿಲ್ಲ. ಅಲ್ಪಸಂಖ್ಯಾತರ ಮತಗಳನ್ನು ವಿಂಗಡಿಸುವುದೇ ಅವರ ಉದ್ದೇಶ. ಆದರೆ ಜನ ಬುದ್ದಿವಂತರಿದ್ದಾರೆ. ಇಂತಹ ತಂತ್ರಗಳು ಜನರಿಗೆ ಅರ್ಥವಾಗುತ್ತವೆ ಎಂದು ತಿಳಿಸಿದರು.
ಆದಾಯ ತೆರಿಗೆ ದಾಳಿಯಲ್ಲಿ ರಾಜಕೀಯ ಇದೆ ಎಂಬುದು ನನ್ನ ಅನುಮಾನ. ಯಡಿಯೂರಪ್ಪ, ವಿಜಯೇಂದ್ರ ಆಪ್ತರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನನಗಂತು ಇದರಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂದು ಹೇಳಿದರು.