ಶಿವಮೊಗ್ಗ,ಅ.6 : ಆರ್ಎಸ್ಎಸ್ ಕುರಿತು ಲಘುವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಘದ ಶಾಖೆಗೆ ಬಂದು ಶಿಕ್ಷಣ ಪಡೆಯಲಿ. ಇದರಿಂದ ಅವರಿಗೂ ಒಳಿತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ವ್ಯಂಗ್ಯಭರಿತ ಸಲಹೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘದ ಬಗ್ಗೆ ಸ್ಪಷ್ಟ ಜ್ಞಾನ ಇಲ್ಲದವರು ಬೇಕಾಬಿಟ್ಟಿ ಹೇಳಿಕೆ ನೀಡುತ್ತಾರೆ. ಕುಮಾರಸ್ವಾಮಿಗೆ ಆರ್ಎಸ್ಎಸ್ ಬಗ್ಗೆ ಗೊತ್ತಾಗಬೇಕಾದರೆ ಮೊದಲು ಸಂಘದ ಶಾಖೆಗೆ ಬರಲಿ ಎಂದು ಸಲಹೆ ಮಾಡಿದರು.
ಅವರು ಅಧಿಕಾರದಲ್ಲಿ ಇದ್ದಾಗ ಜಾತಿವಾದದಲ್ಲಿ ಎಲ್ಲರನ್ನು ತೆಗೆದುಕೊಳ್ಳುತ್ತಿದ್ದರು. ಕುಟುಂಬ ರಾಜಕಾರಣ ಮಾಡಿದರು. ಕುಟುಂಬದವರಿಗೆ ಎಲ್ಲ ಅಧಿಕಾರ ಕೊಟ್ಟವರು. ಇಂತಹವರಿಂದ ಬೇರೆ ನಿರೀಕ್ಷೆ ಮಾಡಲು ಸಾಧ್ಯವೇ? ಸಂಘದ ಶಿಕ್ಷಣ ಪಡೆದವರು ಐಎಎಸ್, ಐಪಿಎಸ್ ಅಧಿಕಾರಿಯಾಗದರೆ ನಾವು ಸಂತೋಷ ಪಡುತ್ತೇವೆ. ಅವರಿಂದಾಗಿ ದೇಶಕ್ಕೆ ಇನ್ನಷ್ಟು ಒಳ್ಳೆಯದು ಆಗುತ್ತದೆ ಎಂದರು.
ಇದೇ ವೇಳೆ ಉಪಚುನಾವಣೆ ಕುರಿತು ಮಾತನಾಡಿದ ಕಟೀಲ್, ಸಿಂಧಗಿ ಹಾಗೂ ಹಾನಗಲ್ ಕ್ಷೇತ್ರದಲ್ಲಿ ಉಪ ಚುನಾವಣೆ ಘೋಷಣೆ ಆಗಿದೆ. ಬಿಜೆಪಿ ಈಗಾಗಲೇ ಮತಗಟ್ಟೆ ಕಾರ್ಯಕ್ರಮ ಮುಗಿಸಿದೆ. ಎಲ್ಲ ಕಾರ್ಯಕರ್ತರು ಮನೆ ಮನೆ ಸಂಪರ್ಕ ಕಾರ್ಯಕ್ರಮ ಆರಂಭಿಸಿದ್ದಾರೆ ಎಂದು ತಿಳಿಸಿದರು.
ಎರಡು ಕಡೆಯಲ್ಲಿ ಬಿಜೆಪಿ ಪರವಾದ ಅಲೆ ಇದೆ
ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು ಹಾಗೂ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಜನರ ಬಳಿ ಮತಯಾಚನೆ ಮಾಡುತ್ತೇವೆ ಎಂದು ಹೇಳಿದರು.