ಬೆಂಗಳೂರು: ಬಡ ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ಬೆಂಗಳೂರು ಗ್ರಾಮಾಂತರ ಸಂಸದ ಡಾ ಸಿಎನ್ ಮಂಜುನಾಥ್ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಈ ವಿಚಾರಕ್ಕೆ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಇತ್ತೀಚಿನ ದಿನಗಳಲ್ಲಿ ಬದಲಾದ ಆಹಾರ ಶೈಲಿ, ಜೀವನ ಪದ್ಧತಿ ಸೇರಿದಂತೆ ಅನೇಕ ಕಾರಣಗಳಿಂದಾಗಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಕ್ಯಾನ್ಸರ್ ನಿಂದಾಗಿ ಬಳಲುತ್ತಿರುವ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಿಮೋಥೆರಪಿಗೆ ಬಳಸುವ ಅನೇಕ ಔಷಧಗಳನ್ನು ಕಸ್ಟಮ್ಸ್ ಸುಂಕ ರಿಯಾಯಿತಿ ನೀಡಲಾಗಿದೆ.
ಕ್ಯಾನ್ಸರ್ ನಿಂದ ಸಂಪೂರ್ಣವಾಗಿ ಗುಣಮುಖರಾಗಲು ಮುಂದುವರಿದ ಚಿಕಿತ್ಸಾ ಭಾಗವಾಗಿ ಕಿಮೋಥೆರಪಿಯ ಜೊತೆಗೆ ಇಮ್ಯೂನೋಥೆರಪಿಯ ಅವಶ್ಯಕತೆ ಇದ್ದು, ಪ್ರಸ್ತುತ ಇಮ್ಯೂನೋಥೆರಪಿ ಚಿಕಿತ್ಸೆಗೆ ಪ್ರತಿ ರೋಗಿಗೆ ಸುಮಾರು 20-50 ಲಕ್ಷ ದಷ್ಟು ಖರ್ಚಾಗುತ್ತಿದೆ. ಈ ಹಿನ್ನಲೆ ವಿದೇಶದಿಂದ ಆಮದು ಮಾಡಿಕೊಳ್ಳಲಾಗುವ ಇಮ್ಯೂನೋಥೆರಪಿ ಗೆ ಬಳಸುವ ಔಷಧಗಳನ್ನು ಮತ್ತು ರೇಡಿಯೋಥೆರಪಿ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡುವಂತೆ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ವಿದೇಶದಿಂದ ಆಮದು ಮಾಡಿಕೊಳ್ಳಲಾಗುವ ಇಮ್ಯೂನೋಥೆರಪಿ ಗೆ ಬಳಸುವ ಔಷಧಗಳನ್ನು ಮತ್ತು ರೇಡಿಯೋಥೆರಪಿ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕ ವಿನಾಯಿತಿಯಿಂದ ಕ್ಯಾನ್ಸರ್ ಚಿಕಿತ್ಸಾ ವೆಚ್ಚ ಕಡಿಮೆಯಾಗಲಿದ್ದು ಇದರಿಂದಾಗಿ ಲಕ್ಷಾಂತರ ಬಡವರಿಗೆ ಅನುಕೂಲವಾಗಲಿದೆ ಮತ್ತು ಕೈಗೆಟಕುವ ದರದಲ್ಲಿ ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.
ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಆದಷ್ಟು ಬೇಗ ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು ಎಂದು ಸಿಹಿ ಸುದ್ದಿ ನೀಡಿದ್ದಾರೆ.