ಅತಿಯಾಗಿ ಡಯಟ್ ಮಾಡುವುದು ಹೃದಯಾಘಾತಕ್ಕೆ ಕಾರಣವಾಗುತ್ತದಾ? ಈ ಸಂಶಯ ನಮ್ಮಲ್ಲಿ ಅನೇಕರಿಗಿದೆ. ಇದರ ಬಗ್ಗೆ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಇತ್ತೀಚೆಗೆ ಸುವರ್ಣ ನ್ಯೂಸ್ ಜೊತೆಗಿನ ಸಂವಾದದಲ್ಲಿ ಉತ್ತರಿಸಿದ್ದರು.
ಜೀವನ ಶೈಲಿಯಿಂದಾಗಿಯೇ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಅನೇಕ ಸೆಲೆಬ್ರಿಟಿಗಳು ಇತ್ತೀಚೆಗಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ನಿದರ್ಶನಗಳು ಹೆಚ್ಚಾಗುತ್ತಿವೆ. ಇದಕ್ಕೆ ಅವರು ಸೌಂದರ್ಯ ವೃದ್ಧಿಗಾಗಿ ತೆಗೆದುಕೊಳ್ಳುವ ಚಿಕಿತ್ಸೆ, ಅತಿಯಾದ ಡಯಟ್ ಕಾರಣ ಎಂದು ಕೆಲವರು ಹೇಳುತ್ತಾರೆ.
ಇದು ನಿಜವೇ? ಡಾ ಸಿಎನ್ ಮಂಜುನಾಥ್ ಪ್ರಕಾರ ನಮ್ಮ ಆಹಾರ ಶೈಲಿಯೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಡಯಟ್ ಎನ್ನುವುದು ಹೇಗಿರಬೇಕೆಂದರೆ ಅದು ನಾವು ಚಿಕ್ಕಂದಿನಿಂದಲೂ ರೂಢಿಸಿಕೊಂಡು ಬಂದಿರುವ ಆಹಾರ ಪದ್ಧತಿಗೆ ಪೂರಕವಾಗಿರಬೇಕು.
ಒಂದು ವೇಳೆ ನಮ್ಮ ದೈನಂದಿನ ಆಹಾರ ಪದ್ಧತಿಗೆ ವಿರುದ್ಧವಾಗಿ ಸಂಪೂರ್ಣ ಬದಲಾದ ಆಹಾರ ಶೈಲಿ ರೂಢಿಸಿಕೊಳ್ಳುವುದರಿಂದ ಹೃದಯಾಘಾತವಾಗುವ ಸಾಧ್ಯತೆಯಿರುತ್ತದೆ. ತುಂಬಾ ಡಯಟ್ ಮಾಡಿದಾಗ ಶರೀರದಲ್ಲಿ ಏನು ಬದಲಾವಣೆಯಾಗುತ್ತದೆ ನೋಡಬೇಕು. ದೇಹದಲ್ಲಿ ಸೋಡಿಯಂ ಲೆವೆಲ್ ಕಡಿಮೆಯಾದಾಗ, ಪೊಟೇಶಿಯಂ ಸಾಲ್ಟ್ ಕಡಿಮೆಯಾದಾಗ ಹೃದಯಾಘಾತವಾಗಬಹುದು ಎಂದು ಹೇಳಿದ್ದರು.