ಮೈಸೂರು: ಕೋವಿಡ್ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟ ಗೌರಮ್ಮ ಎಂಬುವವರ ಚಿನ್ನದ ಸರ ಕಳ್ಳತನವಾಗಿದ್ದು, ಈ ಬಗ್ಗೆ ವಿದ್ಯಾರಣ್ಯಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾದರೂ ಪೊಲೀಸರು ಸಮರ್ಪಕವಾಗಿ ತನಿಖಾ ಕಾರ್ಯ ಕೈಗೊಂಡಿಲ್ಲ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ. ಎಸ್. ಶಿವರಾಮು ಆರೋಪಿಸಿದರು.
ಹೈಲೈಟ್ಸ್:
•ನಮ್ಮ ತಾಯಿ ಚಿನ್ನದ ಸರ ವಾಪಸ್ ಕೊಡ್ಸಿ
•ಖಾಸಗಿ ಆಸ್ಪತ್ರೆ ಕ್ರಮಕ್ಕೆ ಪುತ್ರನ ಬೇಸರ
•ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ
ಏಪ್ರಿಲ್ನಲ್ಲಿ ತಮ್ಮ ಸ್ನೇಹಿತರಾದ ಎಂ. ಕೆ. ಯಶವಂತ್ ಅವರ ತಾಯಿಯನ್ನು ಕೋವಿಡ್ನಿಂದಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಹೃದಯಾಘಾತದಿಂದ ಮೃತಪಟ್ಟರೆಂದು ತಿಳಿಸಿ 2.98 ಲಕ್ಷ ರೂ. ಕಟ್ಟಿಸಿಕೊಂಡು ಮೃತದೇಹ ನೀಡಿದರು.
ಮೃತದೇಹ ಪಡೆಯುವ ವೇಳೆ ತೆಗೆದಿಟ್ಟ ಚಿನ್ನಾಭರಣಗಳನ್ನು ವಾರಸುದಾರರಿಗೆ ವಾಪಸ್ ಮಾಡುವಾಗ ಚಿನ್ನದ ಸರವನ್ನು ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಆಸ್ಪತ್ರೆ ಆಡಳಿತ ವರ್ಗ ಉಡಾಫೆಯ ಉತ್ತರ ನೀಡುತ್ತಿದೆ ಎಂದು ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಯಶವಂತ್ ಕುಮಾರ್ ಮಾತನಾಡಿ, 'ನಮಗೆ ಚಿನ್ನದ ಸರ ಮುಖ್ಯವಲ್ಲ. ಅದು ನನ್ನ ತಾಯಿ ಧರಿಸುತ್ತಿದ್ದರು ಎಂಬ ಭಾವನಾತ್ಮಕ ಸಂಬಂಧ ಇದೆ. ಹೀಗಾಗಿ ಸರ ವಾಪಸ್ ಮಾಡಿ ಎಂಬುದು ನಮ್ಮ ಆಗ್ರಹ' ಎಂದು ಭಾವುಕರಾದರು. ಮುಖಂಡರಾದ ಲೋಕೇಶ್ ಮಾದಾಪುರ, ಆರ್.ಕೆ.ರವಿ, ವಿಶ್ವ ಕದಂಬ ಮುಂತಾದವರು ಹಾಜರಿದ್ದರು.