ನವದೆಹಲಿ(ಜು.20): ಕೊರೋನಾ ವೈರಸ್ ವಿರುದ್ಧ ದೇಶದಲ್ಲಿ ಪರಿಣಾಮಕಾರಿಯಾಗಿ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಜನವರಿ 16 ರಂದು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಜೂನ್ 21 ರಿಂದ ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುತ್ತಿದೆ. ಇದರ ಪರಿಣಾಮ ಖಾಸಗಿ ಆಸ್ಪತ್ರೆಗಳಲ್ಲಿನ ಲಸಿಕಾ ಅಭಿಯಾನದ ಬೇಡಿಕೆ ಕಡಿಮೆಯಾಗಿದೆ. ಇದರಿಂದ ದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಬರೋಬ್ಬರಿ 2.11 ಕೋಟಿ ಲಸಿಕೆ ಬಳಕೆಯಾಗದೇ ಉಳಿದುಕೊಂಡಿದೆ.
• ಸರ್ಕಾರದಿಂದ ಉಚಿತ ಲಸಿಕೆ ಅಭಿಯಾನದಿಂದ ಖಾಸಗಿ ಆಸ್ಪತ್ರೆಗಿಲ್ಲ ಬೇಡಿಕೆ
• ಖಾಸಗಿ ಆಸ್ಪತ್ರೆಗಳಲ್ಲಿ 2.11 ಕೋಟಿ ಲಸಿಕೆ ಬಳಕೆಯಾಗದೆ ಉಳಿದಿದೆ
• ಭಾರತದಲ್ಲಿ 42.15 ಕೋಟಿ ಲಸಿಕೆ ಡೋಸ್ ಹಂಚಿಕೆ
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆ ಆಗದೆ ಉಳಿದಿರುವ 2.11 ಕೋಟಿಗಿಂತ ಹೆಚ್ಚಿನ ಅಂದರೆ 2,11,93,241 ಡೋಸ್ ಲಸಿಕೆ ಬಳಕೆಗೆ ಲಭ್ಯವಿದೆ.
ದೇಶಾದ್ಯಂತ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಈ ಕಾರ್ಯಕ್ರಮದ ಗತಿಗೆ ವೇಗ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕೋವಿಡ್-19 ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯತೆ ಖಾತರಿಪಡಿಸುವ ಮೂಲಕ, ಲಸಿಕೆ ಲಭ್ಯತೆಯ ಮುಂಗಡ ಗೋಚರತೆ ಮತ್ತು ಲಸಿಕೆ ಪೂರೈಕೆಯ ಸರಪಳಿ ಸುಗಮಗೊಳಿಸುವ ಮೂಲಕ ಬೃಹತ್ ಅಭಿಯಾನಕ್ಕೆ ವೇಗ ನೀಡಲಾಗಿದೆ, ಅದರ ವ್ಯಾಪ್ತಿ ಹೆಚ್ಚಿಸಲಾಗಿದೆ.
ದೇಶವ್ಯಾಪಿ ಲಸಿಕೆ ಆಂದೋಲನದ ಭಾಗವಾಗಿ, ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಸುತ್ತಿದೆ. ಅಭಿಯಾನದ ಸಾರ್ವತ್ರೀಕರಣದ ಹೊಸ ಹಂತದಲ್ಲಿ ಕೇಂದ್ರ ಸರ್ಕಾರವು ದೇಶೀಯ ಲಸಿಕೆ ಉತ್ಪಾದನಾ ಕಂಪನಿಗಳಿಂದ 75% ಲಸಿಕೆಯನ್ನು ಖರೀದಿಸಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸುತ್ತಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 42.15 ಕೋಟಿ ಡೋಸ್ ಗಿಂತ ಹೆಚ್ಚಿನ ಅಂದರೆ 42,15,43,730 ಡೋಸ್ ಲಸಿಕೆ ಪೂರೈಸಲಾಗಿದೆ, ಇನ್ನೂ ಹೆಚ್ಚಿನ 71,40,000 ಡೋಸ್ ಲಸಿಕೆ ಅತಿಶೀಘ್ರವೇ ಪೂರೈಕೆ ಆಗಲಿದೆ. ಇಂದಿನ ಮಾಹಿತಿ ಪ್ರಕಾರ, 42.15 ಕೋಟಿ ಡೋಸ್ ಲಸಿಕೆ ಪೈಕಿ ಸವಕಳಿ ಸೇರಿದಂತೆ 40,03,50,489 ಡೋಸ್ ಲಸಿಕೆ ಬಳಕೆಯಾಗಿದೆ.