Publish Date: Sat, 26 Feb 2022 (09:15 IST)
Updated Date: Sat, 26 Feb 2022 (09:17 IST)
ಹೊನ್ನಾಳಿ: ಪ್ರಿಯಕರ ಕೈ ಕೊಟ್ಟಿದ್ದರಿಂದ ಬೇಸತ್ತ ಯುವತಿ ಆತನನ್ನು ಹೇಗಾದರೂ ತನ್ನ ಬಳಿಗೆ ಕರೆಸಿಕೊಳ್ಳಲು ಅತ್ಯಾಚಾರದ ನಾಟಕವಾಡಿ ಪೊಲೀಸರ ಅತಿಥಿಯಾಗಿದ್ದಾಳೆ.
ಶಿವಮೊಗ್ಗದ ಯುವತಿ ದಾವಣಗೆರೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಯುವಕನೊಬ್ಬನ ಪ್ರೀತಿಗೆ ಬಿದ್ದಿದ್ದಳು. ಆದರೆ ಅದೇನಾಯ್ತೋ, ಇಬ್ಬರಿಗೂ ಬ್ರೇಕಪ್ ಆಯ್ತು. ಆದರೆ ಯುವತಿಗೆ ಪ್ರೇಮಿಯನ್ನು ಬಿಟ್ಟಿರಲು ಮನಸ್ಸಿರಲಿಲ್ಲ. ಯುವಕ ಏನೇ ಆದ್ರೂ ಫೋನ್ ರಿಸೀವ್ ಮಾಡ್ತಿರಲಿಲ್ಲ.
ಹೀಗಾಗಿ ಇನ್ನೊಬ್ಬರ ಮೊಬೈಲ್ ನಿಂದ ನಿಮ್ಮ ಹುಡುಗಿ ಕಿಡ್ನ್ಯಾಪ್ ಆಗಿದ್ದಾಳೆ ಎಂದು ಸುಳ್ಳು ಸಂದೇಶ ಕಳುಹಿಸಿದ್ದಳು. ಆದರೆ ಯುವಕ ಇದಕ್ಕೆ ಕ್ಯಾರೇ ಎನ್ನದೇ ಯುವತಿ ಮನೆಯವರಿಗೆ ಸಂದೇಶ ಫಾರ್ವರ್ಡ್ ಮಾಡಿದ್ದ. ಗಾಬರಿಯಾದ ಯುವತಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.
ಈ ವೇಳೆ ಯುವತಿ ತನ್ನನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರ ಮಾಡಲಾಗಿದೆ ಎಂದು ನಾಟಕವಾಡಿದ್ದಳು. ಈಕೆಯ ಮಾತು ನಂಬಿ ಪೊಲೀಸರು ನಾಲ್ಕೈದು ಟೀಂ ಕಟ್ಟಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಆಗಲೇ ಯುವತಿಯ ಅಸಲಿಯತ್ತು ಗೊತ್ತಾಗಿದ್ದು. ಹೀಗಾಗಿ ಸುಳ್ಳು ಕತೆ ಹೇಳಿ ಪೊಲೀಸರಿಗೆ ವಂಚಿಸಲು ಹೊರಟಿದ್ದಕ್ಕೆ ಯುವತಿಯನ್ನೇ ಅರೆಸ್ಟ್ ಮಾಡಲಾಗಿದೆ.