ಹೊಸಪೇಟೆ: ಮುರಿದು ಹೋಗಿದ್ದ ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್‌ಗೆ ತಾತ್ಕಾಲಿಕ ಗೇಟ್ ಅಳವಡಿಕೆ ಪೂರ್ಣಗೊಂಡಿದ್ದು, ತಜ್ಞರ ನಿರೀಕ್ಷೆಯಂತೆ ನೀರು ಹೊರಹರಿಯುವಿಕೆ ಬಹುತೇಕ ನಿಂತುಹೋಗಿದೆ.
ತಾತ್ಕಾಲಿಕ ಗೇಟ್‌ನಿಂದ ಸ್ವಲ್ಪ ನೀರು ಸೋರಿಕೆ ಸಾಮಾನ್ಯವಾಗಿದ್ದು, ಅದರಿಂದ ದೊಡ್ಡ ನಷ್ಟವಿಲ್ಲ ಎಂದು ಹೇಳಲಾಗುತ್ತಿದೆ.
ಆಗಸ್ಟ್ 10ರಂದು ರಾತ್ರಿ ಗೇಟ್ ಮುರಿದು ಕೊಚ್ಚಿ ಹೋಗಿದ್ದರಿಂದ 36 ಟಿಎಂಸಿ ಅಡಿಗೂ ಅಧಿಕ ನೀರು ನದಿ ಪಾಲಾಗಿತ್ತು. ತಾತ್ಕಾಲಿಕ ಗೇಟ್‌ನಿಂದ ಇದೀಗ ಇನ್ನಷ್ಟು ನೀರು ನದಿ ಪಾಲಾಗುವುದು ತಪ್ಪಿ ಹೋಗಿದೆ.
ಇಂದು ಸನ್ಮಾನ: ತಾತ್ಕಾಲಿಕ ಗೇಟ್ ಅಳವಡಿಸಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ತಂತ್ರಜ್ಞರು, ಸಿಬ್ಬಂದಿಯನ್ನು ಇಂದು ಮಧ್ಯಾಹ್ನ ಅಣೆಕಟ್ಟೆಯ ಆವರಣದಲ್ಲಿ ಸನ್ಮಾನಿಸಲು ಸಿದ್ಧತೆ ನಡೆದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು 35 ಸಿಬ್ಬಂದಿಗೆ ತಲಾ ₹50 ಸಾವಿರ ಬಹುಮಾನ ಪ್ರಕಟಿಸಿದ್ದು, ಬಹುತೇಕ ಇಂದೇ ಅದನ್ನು ಶಾಸಕ ಕಂಪ್ಲಿ ಗಣೇಶ್ ಅವರ ಮೂಲಕ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.<>