ನವದೆಹಲಿ: ಲಂಡನ್‌ನ ಹೊಟೇಲ್‌ನಲ್ಲಿ ತಂಗಿದ್ದ ಏರ್ ಇಂಡಿಯಾ ಕ್ಯಾಬಿನ್ ಮಹಿಳಾ ಸಿಬ್ಬಂದಿಯೊಬ್ಬರ ಕೋಣೆಗೆ ನುಗ್ಗಿದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿ, ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.
ಲಂಡನ್‌ನ ಹೀಥ್ರೂನಲ್ಲಿರುವ ರಾಡಿಸನ್ ರೆಡ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ಏರ್ ಇಂಡಿಯಾ ಮೂಲಗಳು ತಿಳಿದುಬಂದಿದೆ. ಮಹಿಳೆ ತನ್ನ ಕೋಣೆಯಲ್ಲಿದ್ದಾಗ ಏಕಾಏಕಿ ಒಳಗೆ ನುಗ್ಗಿದ ವ್ಯಕ್ತಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಹಲ್ಲೆ ಮಾಡಿದ್ದಾನೆ. ಈ ವೇಳೆ ಸಂತ್ರಸ್ತೆ ಜೋರಾಗಿ ಕಿರುಚಿದ್ದಾಳೆ. ತಕ್ಷಣಕ್ಕೆ ಅಲ್ಲಿಗೆ ಬಂದವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಲ್ಲೆಗೊಳಗಾದ ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಈ ಬಗ್ಗೆ ಸ್ಥಳೀಯ ಪೊಲೀಸರು ಮತ್ತು ಹೋಟೆಲ್ ಆಡಳಿತ ಮಂಡಳಿಯೊಂದಿಗೂ ತನಿಖೆ ನಡೆಸಲಾಗುತ್ತಿದೆ.
ಆ ವ್ಯಕ್ತಿ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಅವರು ಕೂಗಿಕೊಂಡಿದ್ದಾರೆ. ತಕ್ಷಣಕ್ಕೆ ಕೆಲವರು ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಲಂಡನ್ ಹೋಟೆಲ್‌ನಲ್ಲಿ ಅಸಮರ್ಪಕ ಭದ್ರತೆ, ಬಗ್ಗೆ ಈ ಹಿಂದೆಯೂ ದೂರುಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.