Publish Date: Tue, 02 Jul 2024 (11:53 IST)
Updated Date: Tue, 02 Jul 2024 (11:57 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಯಲ್ ಟ್ರೀಟ್ ಮೆಂಟ್ ಕೊಡಲಾಗುತ್ತಿದೆ ಎಂಬ ಆರೋಪಗಳಿಗೆ ಗೃಹಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ದರ್ಶನ್ ತಾಯಿ ಮತ್ತು ಸಹೋದರ ನಿನ್ನೆ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ ಪೊಲೀಸರೇ ಅವರನ್ನು ಮಾಧ್ಯಮದ ಕಣ್ಣಿಗೆ ಬೀಳದಂತೆ ಖುದ್ದಾಗಿ ಕರೆದೊಯ್ದಿದ್ದರು. ಈ ರೀತಿ ಸಾಮಾನ್ಯ ಖೈದಿಗಳಿಗೆ ಇಲ್ಲದ ಟ್ರೀಟ್ ಮೆಂಟ್ ದರ್ಶನ್ ಗೆ ಯಾಕೆ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಇದರ ನಡುವೆ ದರ್ಶನ್ ಗೆ ಜೈಲಿನೊಳಗೆ ರಾಯಲ್ ಆತಿಥ್ಯ ನೀಡಲಾಗುತ್ತಿದೆ ಎಂದು ಆರೋಪ ಕೇಳಿಬಂದಿತ್ತು. ಈ ಎಲ್ಲಾ ಆರೋಪಗಳ ಬಗ್ಗೆ ಇಂದು ಮಾಧ್ಯಮಗಳು ಗೃಹಸಚಿವ ಜಿ ಪರಮೇಶ್ವರ್ ಗೆ ಪ್ರಶ್ನೆ ಮಾಡಿವೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ನೀವೇ ನೋಡಿ ಬನ್ನಿ, ನಾನು ಕರ್ಕೊಂಡೋಗ್ತೀನಿ ಎಂದಿದ್ದಾರೆ.
ಏಯ್ ಅವೆಲ್ಲಾ ಏನೂ ಇಲ್ಲ. ಆವತ್ತೇ ಹೇಳಿದ್ನಲ್ವಾ? ರಾಯಲ್ ಟ್ರೀಟ್ ಮೆಂಟ್ ಎಲ್ಲಾ ಏನೂ ಇಲ್ಲ. ಬಾಡೂಟ ಎಲ್ಲಾ ಏನೂ ಕೊಡ್ತಿಲ್ಲ. ಎಲ್ಲಾ ಖೈದಿಗಳಿಗೆ ಕೊಡುವ ಹಾಗೆ ಕೊಡ್ತಿದ್ದಾರೆ. ಸಂಶಯ ಇದ್ದರೆ ನೀವೇ ನೋಡ್ಕೊಳ್ಳಬಹುದು. ಬನ್ನಿ ನಾನೇ ಕರ್ಕೊಂಡೋಗ್ತೀನಿ ಎಂದು ತಮಾಷೆಯಾಗಿ ಹೇಳಿದ್ದಾರೆ.