Publish Date: Sun, 01 Jul 2018 (17:29 IST)
Updated Date: Sun, 01 Jul 2018 (17:34 IST)
ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ತಿಂಗಳುಗಳೇ ಕಳೆಯುತ್ತಿವೆ. ಆದರೂ ಚುನಾವಣೆ ಗುಂಗಿನಿಂದ ರಾಜಕೀಯ ನಾಯಕರು ಇನ್ನೂ ದೂರವಾಗಿಲ್ಲ. ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ಚನ್ನಿಗಪ್ಪ ಗಳ ಗಳ ಅಂತ ರಾಜಕೀಯ ಸನ್ನಿವೇಶ ನೆನಸಿಕೊಂಡು ಅತ್ತಿದ್ದಾರೆ.
ತುಮಕೂರು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಆದ ಸೋಲನ್ನು ನೆನೆದು ಚನ್ನಿಗಪ್ಪ ಅತ್ತಿದ್ದಾರೆ. ಜೆಡಿಎಸ್ ನ ತುಮಕೂರು ಜಿಲ್ಲಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಚನ್ನಿಗಪ್ಪ, ಕಣ್ಣೀರು ಹಾಕುತ್ತಲೇ ಭಾಷಣ ಮಾಡಿದರು. 1983ರಲ್ಲಿ ಯಾವ ಪಕ್ಷದವರು ನಮ್ಮನ್ನು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಆ ಸಮಯದಲ್ಲಿ ನಮಗೆ ಬೆಂಬಲ ನೀಡಿದ್ದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಎಂದರು.
ಶಾಸಕ ಸತ್ಯನಾರಾಯಣಗೆ ಸಚಿವ ಸ್ಥಾನ ಕೊಡಬೇಕಿತ್ತು. ನನ್ನಷ್ಟೇ ಸತ್ಯಣ್ಣ ಹಿರಿಯರಾಗಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸಗೆ ಸಚಿವ ಸ್ಥಾನ ಕೊಡುವ ಬದಲು ಸತ್ಯನಾರಾಯಣರಿಗೆ ಸಚಿವ ಸ್ಥಾನ ಕೊಡಬೇಕಿತ್ತು ಎಂದಿದ್ದಾರೆ.
ಅಂದ್ಹಾಗೆ, ತುಮಕೂರು ಜಿಲ್ಲಾ ಜೆಡಿಎಸ್ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಳುತ್ತಲೇ ಚನ್ನಿಗಪ್ಪ ಮಾತನಾಡಿದರು.