ಬೆಂಗಳೂರು ಜೆ.ಸಿ. ರಸ್ತೆ ಮೇಲ್ಸೇತುವೆ ಅಂದಾಜು ವೆಚ್ಚ ₹50 ಕೋಟಿಯಷ್ಟು ಹೆಚ್ಚಾಗಿದ್ದು , 220 ಕೋಟಿಯಿಂದ 270 ಕೋಟಿಗೆ ತಲುಪಿದೆ. ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಭೆಯಲ್ಲಿ ಮಂಗಳವಾರ ಈ ಯೋಜನೆಯ ಅನುಮೋದನೆ ಬಗ್ಗೆ ಚರ್ಚೆ ನಡೆಯಲಿದೆ. ಮಿನರ್ವ ವೃತ್ತದಿಂದ ಟೌನ್ ಹಾಲ್ ಮೂಲಕ ಹಡ್ಸನ್ ವೃತ್ತದವರೆಗೆ ಏಳು ಜಂಕ್ಷನ್ಗಳಲ್ಲಿ ಸಿಗ್ನಲ್ ಮುಕ್ತ ಸಂಚಾರವನ್ನು ಈ ಮೇಲ್ಸೇತುವೆ ಒದಗಿಸಲಿದೆ. ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಲ್ಲಿ ರಾಜ್ಯ ಸರ್ಕಾರ ₹220 ಕೋಟಿಯನ್ನು ಜೆ.ಸಿ. ರಸ್ತೆ ಮೇಲ್ಸೇತುವೆ ನಿರ್ಮಿಸಲು ಅನುಮೋದನೆ ನೀಡಿದೆ. ಯೋಜನೆಯ ತಾಂತ್ರಿಕ ವಿವರಗಳನ್ನು ಟಿಎಸಿ ಅಂತಿಮಗೊಳಿಸುವುದು ವಿಳಂಬವಾದ್ದರಿಂದ ಯೋಜನೆ ವೆಚ್ಚ ಹೆಚ್ಚಾಗಲಿದೆ ಎಂದು ಬಿಬಿಎಂಪಿ ಆತಂಕ ವ್ಯಕ್ತಪಡಿಸಿದೆ. ಮೊದಲು 2014ರಲ್ಲಿ ಈ ಮೇಲ್ಸೇತುವೆ ನಿರ್ಮಿಸಲು ಬಿಬಿಎಂಪಿ ಯೋಜಿಸಿತ್ತು. 2018ರಲ್ಲಿ ಯೋಜನೆಯನ್ನು ಕೈಬಿಟ್ಟಿತ್ತು. ಬಿಬಿಎಂಪಿಯು ಪ್ರಸ್ತುತ 1.8 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಿದ್ದು, ಇದರಿಂದ ಸಂಚಾರ ದಟ್ಟಣೆ ಶೇ 46ಷ್ಟು ಕಡಿಮೆಯಾಗಲಿದೆ. ಮಿನರ್ವ ವೃತ್ತ ಮತ್ತು ಆರ್.ವಿ. ರಸ್ತೆಯಲ್ಲಿ ರ್ಯಾಂ ಪ್ ನಿರ್ಮಾಣವಾಗಲಿದೆ. ಹಡ್ಸನ್ ವೃತ್ತದಲ್ಲಿ ಮೆಜೆಸ್ಟಿಕ್ ಹಾಗೂ ಕಸ್ತೂರ ಬಾ ರಸ್ತೆ ಕಡೆಗೆ ರ್ಯಾಂಪ್ ಇರಲಿದೆ.