ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳು ಹೊರೆಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಸಕಾಲಕ್ಕೆ ಹಣ ಕೊಡದೇ ಇದ್ದರೆ ಗೃಹಜ್ಯೋತಿ ಹಣವನ್ನು ಜನರಿಂದಲೇ ವಸೂಲಿ ಮಾಡಲು ಅವಕಾಶ ಕೊಡಿ ಎಂದು ಎಸ್ಕಾಂಗಳು ಸರ್ಕಾರಕ್ಕೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ.
ಗೃಹಜ್ಯೋತಿ ಯೋಜನೆಯಡಿ ಜನರಿಗೆ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ. ಆದರೆ ಇದರ ಪರವಾಗಿ ಸರ್ಕಾರವೇ ವಿದ್ಯುತ್ ಆಯೋಗಕ್ಕೆ ಹಣ ಪಾವತಿ ನೀಡಬೇಕು. ಆದರೆ ಸಕಾಲಕ್ಕೆ ಹಣ ಪಾವತಿಯಾಗುತ್ತಿಲ್ಲ ಎಂಬ ಆಕ್ಷೇಪ ಬಂದಿದೆ.
ಗೃಹಜ್ಯೋತಿ ಸಬ್ಸಿಡಿ ಪ್ರಯುಕ್ತ ನೀಡಬೇಕಾಗಿರುವ ಹಣವನ್ನು ಸರ್ಕಾರ ಮುಂಗಡವಾಗಿ ನೀಡಬೇಕು.ಇಲ್ಲದೇ ಹೋದರೆ ಜನರಿಂದಲೇ ಹಣ ವಸೂಲಿ ಮಾಡಲು ಅವಕಾಶ ನೀಡಬೇಕು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಎಸ್ಕಾಂಗಳು ಮನವಿ ಮಾಡಿವೆ.
ಒಂದು ವೇಳೆ ಸರ್ಕಾರ ಮುಂಗಡ ಹಣ ನೀಡದೇ ಇದ್ದರೆ ಗೃಹಜ್ಯೋತಿ ಫಲಾನುಭವಿಗಳಿಗೆ ವಿದ್ಯುತ್ ಬಿಲ್ ನೀಡಲಾಗುತ್ತದೆ. ಮೊದಲು ಎಸ್ಕಾಂಗಳಿಗೆ ವಿದ್ಯುತ್ ಬಿಲ್ ಪಾವತಿ ಮಾಡಿ ಬಳಿಕ ಸರ್ಕಾರದಿಂದ ಅದನ್ನು ಕ್ಲೈಮ್ ಮಾಡಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ಜನರಿಗೆ ಮೊದಲು ವಿದ್ಯುತ್ ಬಿಲ್ ಪಾವತಿ ಮಾಡುವುದು ಅದನ್ನು ಸರ್ಕಾರದಿಂದ ಕ್ಲೈಮ್ ಮಾಡಿಕೊಳ್ಳುವುದು ಹೆಚ್ಚುವರಿ ತಲೆನೋವಾಗಲಿದೆ.