Publish Date: Thu, 23 Apr 2020 (22:05 IST)
Updated Date: Thu, 23 Apr 2020 (22:06 IST)
ಪಾದರಾಯನಪುರದಿಂದ ಲಾಕ್ ಡೌನ್ ಉಲ್ಲಂಘನೆ ಮಾಡಿ ತಪ್ಪಿಸಿಕೊಂಡು ಓಡಾಡುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಬೆಂಗಳೂರಿನ ಪಾದರಾಯನಪುರ ಸೇರಿದಂತೆ ಜಯನಗರ, ಚಾಮರಾಜಪೇಟೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮರಾಠಿಪಾಳ್ಯಕ್ಕೆ ಆಗಮಿಸಿದ್ದ ಐವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪಾದರಾಯನಪುರ ಗಲಭೆ ಪ್ರಕರಣದ ನಂತರ ಕದ್ದುಮುಚ್ಚಿ ಪಾದರಾಯನಪುರ ಮತ್ತು ಚಾಮರಾಜಪೇಟೆಯ ತಲಾ ಇಬ್ಬರು ಹಾಗೂ ಜಯನಗರದ ಓರ್ವ ವ್ಯಕ್ತಿ ಸೇರಿ ಒಟ್ಟು ಐದು ಮಂದಿ ಆಟೋ ಮೂಲಕ ಮರಾಠಿಪಾಳ್ಯದ ಸಂಬಂಧಿಕರ ಮನೆಗೆ ಆಗಮಿಸಿದ್ದರು.
ಈ ವೇಳೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು 5 ಮಂದಿಯನ್ನು ವಶಕ್ಕೆ ಪಡೆದು ಕ್ವಾರಂಟೈನ್ ಗೆ ಒಳಪಡಿಸಿದ್ದಾರೆ. ಈ ಐದು ಮಂದಿ ವಿರುದ್ಧವೂ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.