ಮೈಸೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬಗ್ಗೆ ಬೇರೆ ಅರ್ಥ ಕಲ್ಪಿಸಬೇಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದೊಂದು ಔತಣಕೂಟವಷ್ಟೇ, ಯಾವುದೇ ಗೊಂದಲ ಬೇಡ ಎಂದು ಅನುಮಾನಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ. ಇದನ್ನು ಕೇವಲ 'ಪೊಲಿಟಿಕಲ್ ಬ್ರೇಕ್ ಫಾಸ್ಟ್' ಎಂದು ಕರೆಯುವುದು ಅಥವಾ ಭಾವಿಸುವುದು ಸರಿಯಲ್ಲ. ಈ ಸಭೆಗಳಿಗೆ ರಾಜಕೀಯ ಬಣ್ಣ ಬಳಿಯುವ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತವಿದೆ ಎಂಬುದು ಸತ್ಯಕ್ಕೆ ದೂರವಾದ ಮಾತಾಗಿದ್ದು, ನಮ್ಮ ನಡುವೆ ಯಾವುದೇ ಭಿನ್ನಮತಗಳಿಲ್ಲ. ಹೊರಗಡೆಯಷ್ಟೇ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ ಎಂದರು.
ಕೆಲವು ಸಮುದಾಯಗಳ ಶಾಸಕರು ತಮ್ಮ ನಾಯಕರ ಪರ ಧ್ವನಿ ಎತ್ತಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರವರ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಈ ಎಲ್ಲ ಬೆಳವಣಿಗೆ ಬಗ್ಗೆ ಅಂತಿಮವಾಗಿ ನಮ್ಮ ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಕೈಗೊಳ್ಳುತ್ತೆ. ಅವರ ನಿರ್ಧಾರಕ್ಕೆ ನಾವು ಬದ್ಧ. ಈಗಾಗಲೇ ಸಿಎಂ ಮತ್ತು ಡಿಸಿಎಂ ಅವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಹೇಳಿದ್ದಾರೆ. ಅಲ್ಲಿಗೆ ಎಲ್ಲಾ ಗೊಂದಲಗಳು ಮತ್ತು ಚರ್ಚೆಗಳು ಮುಗಿದಿದೆ ಎಂದರು.