Publish Date: Mon, 28 Oct 2024 (10:29 IST)
Updated Date: Mon, 28 Oct 2024 (10:31 IST)
ಚನ್ನಪಟ್ಟಣ: ಚುನಾವಣೆ ಎಂದರೆ ರಾಜಕಾರಣಿಗಳ ನಾಲಿಗೆ ಎಗ್ಗಿಲ್ಲದೇ ಹರಿದಾಡುತ್ತದೆ. ಇದೀಗ ಅದೇ ಆವೇಶದಲ್ಲಿ ಮಾಜಿ ಸಂಸದ, ಕಾಂಗ್ರೆಸ್ ನಾಯಕ ಡಿಕೆ ಸುರೇಶ್, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ನೀಡಿದ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಚನ್ನಪಟ್ಟಣದಲ್ಲಿ ಈ ಬಾರಿ ಸಿಪಿ ಯೋಗೇಶ್ವರ್ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದಾರೆ. ಅವರ ಪರವಾಗಿ ಡಿಕೆ ಸುರೇಶ್ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಡಿಕೆ ಸುರೇಶ್ ನೀಡಿರುವ ಹೇಳಿಕೆಯೊಂದು ಜೆಡಿಎಸ್ ಗೆ ಕಾಂಗ್ರೆಸ್ ವಿರುದ್ಧ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.
ಚನ್ನಪಟ್ಟಣದ ಎನ್ ಡಿಎ ಅಭ್ಯರ್ಥಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರವಾಗಿ ಪ್ರಚಾರ ನಡೆಸಲು ದೇವೇಗೌಡರು ಆಂಬ್ಯುಲೆನ್ಸ್ ನಲ್ಲಾದರೂ ಬರಲಿ, ಅವರ ಆರೋಗ್ಯ ಚೆನ್ನಾಗಿರಲಿ ಎಂದು ಡಿಕೆ ಸುರೇಶ್ ಹೇಳಿದ್ದರು. ಅವರ ಈ ಹೇಳಿಕೆ ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಅವರ ಈ ಹೇಳಿಕೆಗೆ ಇಂದು ಕುಮಾರಸ್ವಾಮಿ ತಿರುಗೇಟು ಕೊಡುವ ಸಾಧ್ಯತೆಯಿದೆ. ದೇವೇಗೌಡರು ಹಿರಿಯ ರಾಜಕಾರಣಿ. ರಾಜಕೀಯ ಏನೇ ಇರಲಿ, ಒಬ್ಬ ಹಿರಿಯ ರಾಜಕಾರಣಿಯ ಆರೋಗ್ಯವನ್ನು ಇಟ್ಟುಕೊಂಡು ಈ ರೀತಿ ನಾಲಿಗೆ ಹರಿಯಬಿಡುವುದು ಎಷ್ಟು ಸರಿ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.