ಚನ್ನಪಟ್ಟಣ: ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಇಂದು ರೋಡ್ ಶೋ ಬಳಿಕ ನಾಮ ಪತ್ರ ಸಲ್ಲಿಕೆ ಮಾಡಲಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಸಿಪಿ ಯೋಗೇಶ್ವರ್ ನಿನ್ನೆ ರೋಡ್ ಶೋ ನಡೆಸಿ ಬಳಿಕ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ವೇಳೆ ಅವರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಕಾಂಗ್ರೆಸ್ ನಾಯಕರ ದಂಡೇ ಸಾಥ್ ನೀಡಿತ್ತು. ರೋಡ್ ಶೋ ವೇಳೆ ಯೋಗೇಶ್ವರ್ ಪರ ಕಾಂಗ್ರೆಸ್ ನಾಯಕರು ಮತ ಯಾಚನೆಯನ್ನೂ ಮಾಡಿದರು.
ಇಂದು ನಿಖಿಲ್ ಕುಮಾರಸ್ವಾಮಿ ಸರದಿ. ಇಂದು ತಮ್ಮ ಪುತ್ರನ ನಾಮಪತ್ರ ಸಲ್ಲಿಕೆ ವೇಳೆ ಎಚ್ ಡಿ ಕುಮಾರಸ್ವಾಮಿ ಬೃಹತ್ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ನೀಡಲಿದ್ದಾರೆ. ಈ ವೇಳೆ ಅವರಿಗೆ ಬಿಜೆಪಿ ನಾಯಕರೂ ಸಾಥ್ ನೀಡಲಿದ್ದಾರೆ. ಈ ಮೂಲಕ ಇಂದು ಎನ್ ಡಿಎ ನಾಯಕರು ಚನ್ನಪಟ್ಟಣದಲ್ಲಿ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ಈ ಬಾರಿ ಯೋಗೇಶ್ವರ್ ವರ್ಸಸ್ ಕುಮಾರಸ್ವಾಮಿ ಎಂಬಂತಾಗಿದೆ. ಬಿಜೆಪಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ಸೇರಿರುವ ಯೋಗೇಶ್ವರ್ ಗೆ ಈಗ ಗೆದ್ದು ಬೀಗುವ ತವಕವಿದೆ. ಇತ್ತ ಕುಮಾರಸ್ವಾಮಿ ಸ್ವಂತ ಕ್ಷೇತ್ರದಲ್ಲಿ ಪುತ್ರನನ್ನು ಗೆಲ್ಲಿಸಿ ಪ್ರತಿಷ್ಠೆ ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಹೀಗಾಗಿ ಚನ್ನಪಟ್ಟಣ ಚುನಾವಣೆ ರಣಾಂಗಣವಾಗಿ ಮಾರ್ಪಟ್ಟಿದೆ.