ಚನ್ನಪಟ್ಟಣ: ಉಪಚುನಾವಣೆಗೆ ಚನ್ನಪಟ್ಟಣದಿಂದ ಸ್ಪರ್ಧಿಸುತ್ತಿರುವ ಸಿಪಿ ಯೋಗೇಶ್ವರ್ ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಬಿಜೆಪಿಯಲ್ಲಿದ್ದಾಗ ತಮಗೆ ಟಿಕೆಟ್ ಕೊಡದೇ ಇರುವುದಕ್ಕೆ ಅವರೇ ಕಾರಣ ಎಂದಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಜೊತೆ ಮೈತ್ರಿ ಆದಾಗ ಕಳೆದ ಲೋಕಸಭಾ ಚುನಾವಣೆ ಸಂದರ್ಭದಿಂದಲೇ ನನಗೆ ಟಿಕೆಟ್ ಕೊಡುವುದು ಇಷ್ಟವಿರಲಿಲ್ಲ. ಆಗೆಲ್ಲಾ ಚನ್ನಪಟ್ಟಣ ಉಪಚುನಾವಣೆಗೆ ಇನ್ನೂ ಸಮಯವಿದೆಯಲ್ವಾ ಎಂದು ವ್ಯಂಗ್ಯ ಮಾಡುತ್ತಲೇ ಬಂದರು. ಆದರೆ ಅವರಿಗೆ ನಾನು ಸ್ಪರ್ಧೆ ಮಾಡುವುದು ಇಷ್ಟವಿರಲಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತಾಗಿದೆ.
ಯಾವಾಗ ನನ್ನ ರಾಜಕೀಯ ಭವಿಷ್ಯಕ್ಕೆ ಅಲ್ಲಿದ್ದರೆ ಪ್ರಯೋಜನವಿಲ್ಲವೆನಿಸಿತೋ ಹಾಗಾಗಿ ನಾನು ಕಾಂಗ್ರೆಸ್ ಸೇರಲು ನಿರ್ಧರಿಸಿದೆ. ಚನ್ನಪಟ್ಟಣ ಉಪಚುನಾವಣೆಗೆ ಕುಮಾರಸ್ವಾಮಿಗೆ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನೇ ನಿಲ್ಲಿಸಬೇಕು ಎಂದು ಆಸೆ. ಆದರೆ ಅಲ್ಲಿ ಕೆಲವು ತಾಲೂಕು ಮಟ್ಟದ ಕಾರ್ಯಕರ್ತರಿಂದ ವಿರೋಧವಿತ್ತು.
ಹೀಗಾಗಿ ಆಗಾಗ ಕಾರ್ಯಕರ್ತರ ಸಭೆ ನಡೆಸೋದು, ಅವರ ಮುಂದೆ ಅಳುವುದು, ಭಾವನಾತ್ಮಕವಾಗಿ ಅವರ ಮನಸ್ಸು ಸೆಳೆಯಲು ಪ್ರಯತ್ನಿಸುವುದು ಮಾಡುತ್ತಲೇ ಇದ್ದರು. ಈಗ ನನ್ನ ವಿರುದ್ಧ ನಿಖಿಲ್ ಕುಮಾರಸ್ವಾಮಿಯವರನ್ನು ನಿಲ್ಲಿಸಿದರೂ ನಾನೇ ಗೆಲ್ತೀನಿ ಎನ್ನುವ ಭರವಸೆ ನನಗಿದೆ ಎಂದು ಯೋಗೇಶ್ವರ್ ಹೇಳಿದ್ದಾರೆ.