ಚನ್ನಪಟ್ಟಣ: ಇಂದು ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿರುವ ಸಿ.ಪಿ. ಯೋಗೇಶ್ವರ್ ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಾಥ್ ನೀಡಲಿದ್ದಾರೆ.
ಮೊನ್ನೆ ಮೊನ್ನೆವರೆಗೂ ಬಿಜೆಪಿಯಲ್ಲಿದ್ದ ಸಿ.ಪಿ.ಯೋಗೇಶ್ವರ್ ಟಿಕೆಟ್ ಸಿಗದ ಬೇಸರದಿಂದ ಪಕ್ಷವನ್ನೇ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ನಿನ್ನೆ ಬೆಳಿಗ್ಗೆ ದಿಡೀರ್ ಸಿಎಂ ನಿವಾಸದಲ್ಲಿ ಕಾಂಗ್ರೆಸ್ ನಾಯಕರನ್ನು ಭೇಟಿಯಾದ ಯೋಗೇಶ್ವರ್ ಮಧ್ಯಾಹ್ನ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು.
ಇದೇ ವೇಳೆ ಇಂದು ನಾಮಪತ್ರ ಸಲ್ಲಿಕೆ ಮಾಡುವ ಬಗ್ಗೆ ಘೋಷಿಸಿದ್ದರು. ಅದರಂತೆ ಇಂದು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ವೇಳೆ ತಮ್ಮ ಜೊತೆ ಸಿಎಂ ಸಿದ್ದರಾಮಯ್ಯ ,ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಇರುತ್ತಾರೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸೇರಿದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ್ದ ಅವರು ನನ್ನ ಸಾರ್ವಜನಿಕ ಪಕ್ಷ ಆರಂಭವಾದ ಕಾಂಗ್ರೆಸ್ ಗೆ ಮರಳಿದ್ದಕ್ಕೆ ಸಂತೋಷವಾಗುತ್ತಿದೆ. ಯಾವುದೇ ಷರತ್ತಿಲ್ಲದೇ ಬಂದಿದ್ದೇನೆ ಎಂದಿದ್ದರು. ಅಲ್ಲದೆ, ಉಪಚುನಾವಣೆಯಲ್ಲಿ ಜನ ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದಿದ್ದರು.