Publish Date: Sun, 01 Feb 2026 (16:07 IST)
Updated Date: Sun, 01 Feb 2026 (16:12 IST)
ರಾಮನಗರ: ಇಂದು ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಯಾವ ಅನುಕೂಲ ಆಗಿಲ್ಲ. ಇನ್ನೂ ಬಜೆಟ್‌ನಿಂದ ಕರ್ನಾಟಕಕ್ಕೆ ಯಾವುದೇ ದೊಡ್ಡ ಪಾಲು ಬಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕೇಂದ್ರ ಬಜೆಟ್ ಸಂಬಂಧ ಕನಕಪುರದಲ್ಲಿ ಪ್ರತಿಕ್ರಿಯಿಸಿದ ನಾನು ಇಷ್ಟೊತ್ತು ಗಮನಿಸಿದೆ, ಈಗೇನೋ ಯಾವುದೋ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಟ್ಟಿದ್ದಾರೆ. ನಾವು ಮನರೇಗಾ ಹೆಸರಲ್ಲಿ ನಮ್ಮ ಕ್ಷೇತ್ರದಲ್ಲೇ ಮ್ಯಾರಥಾನ್ ಮಾಡಿದ್ದೇವೆ. ಮನರೇಗಾ ಬದಲಾವಣೆ ವಾಪಸ್ ತೆಗೆದುಕೊಳ್ಳಲಿ ಎಂದು ಕೇಳಿಕೊಂಡರು.
ಇನ್ನೂ ಕೃಷಿ ವಲಯದಲ್ಲಿ ಎಐ ಬಳಕೆಗೆ ಒತ್ತು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮನರೇಗಾಗೂ ಕೂಡಾ ಎಐ (AI) ಬಳಕೆ ಮಾಡಿ ಕೂಲಿ ತೀರ್ಮಾನ ಮಾಡುತ್ತೇವೆ. ವ್ಯವಸಾಯದ ಕಾಲದಲ್ಲಿ ಕೂಲಿ ಕೊಡಲಿಲ್ಲ ಇವರು. ಇನ್ನೂ ಎಐನಿಂದ ವ್ಯವಸಾಯಕ್ಕೆ ಪ್ರಯೋಜನವಿಲ್ಲ.
ರೇಷ್ಮೆ ಬೆಳೆಗೆ ಉತ್ತೇಜನ ನೀಡಬೇಕು, ಸಕ್ಕರೆ ಬೆಲೆ ಏರಿಕೆ ಮಾಡಿಲ್ಲ. ಸಕ್ಕರೆ ಬೆಲೆ ಏರಿಸಲಿಲ್ಲ ಅಂದರೆ ಕೋಪರೇಟಿವ್ ಸೆಕ್ಟರ್‌ಗಳು ಮುಚ್ಚುವ ಹಂತಕ್ಕೆ ಬರುತ್ತದೆ. ನಮ್ಮ ಭಾಗದ ಐದು ಜಿಲ್ಲೆಯಲ್ಲಿ ಕಬ್ಬು ಬೆಳೆಯುತ್ತಾರೆ. ಕಳೆದ 8ರಿಂದ 9 ವರ್ಷದಿಂದ ಬೆಲೆ ಏರಿಕೆ ಮಾಡಿಲ್ಲ, ಇನ್ನೂ ರೈತರಿಗಾಗಿ ಏನು ಸಹಾಯವನ್ನು ಮಾಡಿದೆ ಎಂದು ಪ್ರಶ್ನೆ ಮಾಡಿದರು.
ಇನ್ನೂ ಬೆಂಗಳೂರಿಗೆ ಹೈಸ್ಪೀಡ್ ರೈಲು ಘೋಷಣೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಯಾವ ಹೈಸ್ಪೀಡ್ ರೈಲು ರೀ? ಯಾವ ಸ್ಪೀಡ್ ರೈಲೂ ಬರಲ್ಲ. 50:50 ಅನುಪಾತದಲ್ಲಿ ಮಾಡಲು ಆಗಲ್ಲ, ಬೇಕಿದ್ರೆ 90:10 ಕೊಡಲಿ. ಆಗ ನಾವು 10% ನಾವು ಕೊಡುತ್ತೇವೆ. ಬೇರೆ ರಾಜ್ಯಗಳಿಗೆ ಅವರೇ ಮಾಡಿಕೊಟ್ಟಿದ್ದಾರೆ. ನಮ್ಮ ರಾಜ್ಯಕ್ಕೂ 90% ಮಾಡಲಿ ಎಂದರು.