ಬೆಂಗಳೂರು: ನಿನ್ನೆ ಸದನದಲ್ಲಿ ಆರ್ ಎಸ್ಎಸ್ ಧ್ಯೇಯ ಗೀತೆ ಹಾಡಿರುವ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಡಿಸಿಎಂ ಡಿಕೆ ಶಿವಕುಮಾರ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸದನದಲ್ಲಿ ಆರ್ ಸಿಬಿ ಕಾಲ್ತುಳಿತದ ಬಗ್ಗೆ ಚರ್ಚೆಯಾಗುತ್ತಿದ್ದಾಗ ವಿಪಕ್ಷ ನಾಯಕ ಆರ್ ಅಶೋಕ್ ಕಾಲೆಳೆದಿದ್ದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್ ಆರ್ ಎಸ್ಎಸ್ ಧ್ಯೇಯ ಗೀತೆ ನಮಸ್ತೇ ಸದಾ ವತ್ಸಲೇ ಹಾಡು ಹಾಡಿ ಎಲ್ಲರನ್ನೂ ಬೆರಗಾಗಿಸಿದ್ದರು.
ಅವರ ಹಾಡು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇಂದು ವಿಧಾನಸೌದದ ಮುಂದೆ ಪತ್ರಕರ್ತರು ಅವರಿಗೆ ಈ ಕುರಿತು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಹಾಡು ಈಗ ಭಾರೀ ಚರ್ಚೆಯಾಗುತ್ತಿದೆ. ನಮ್ಮ ಜೊತೆಗೆ ಶಶಿ ತರೂರ್, ಡಿಕೆ ಶಿವಕುಮಾರ್ ಅಂತಹವರು ಇದ್ದಾರೆ ಎಂದು ಬಿಜೆಪಿಯವರು ಹೇಳ್ತಿದ್ದಾರೆ ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್ ಅಯ್ಯೋ ಮಾತಾಡ್ಲಿ ಬಿಡಪ್ಪಾ. ನಾನು ಕಮ್ಯುನಿಸ್ಟ್ ಬಗ್ಗೆ ರಿಸರ್ಚ್ ಮಾಡಿದ್ದೀನಿ, ಜನತಾ ದಳ ಬಗ್ಗೆ ರಿಸರ್ಚ್ ಮಾಡ್ತಾ ಇರ್ತೀನಿ, ಬಿಜೆಪಿ ಬಗ್ಗೆಯೂ ರಿಸರ್ಚ್ ಮಾಡ್ತಾ ಇರ್ತೀನಿ, ಆರ್ ಎಸ್ಎಸ್ ಬಗ್ಗೆಯೂ ತಿಳಿದುಕೊಂಡಿದ್ದೀನಿ. ಈಗ ಕೆಲವು ಸಂಸ್ಥೆಗಳಲ್ಲಿ ಕೆಲವು ಒಳ್ಳೆ ಗುಣಗಳಿವೆ ಅಲ್ವಾ ಅದನ್ನು ನಾವು ತಿಳಿದುಕೊಳ್ಳಬೇಕು ಎಂದಿದ್ದಾರೆ.