ಬೆಂಗಳೂರು: ಚೀನಾದಲ್ಲಿ ಕಾಣಿಸಿಕೊಂಡು ಇದೀಗ ರಾಜ್ಯದಲ್ಲಿ ಇಬ್ಬರಲ್ಲಿ ಪತ್ತೆಯಾಗಿರುವ ಎಚ್‌ಎಂಪಿವಿ ಸೋಂಕು 2001ರಿಂದ ನಮ್ಮ ದೇಶದಲ್ಲಿದೆ. ಇದರಿಂದ ಯಾವುದೇ ಅಪಾಯವಿಲ್ಲ. ಸಾರ್ವಜನಿಕರು 'ಆತಂಕಪಡುವ ಅಗತ್ಯವಿಲ್ಲ' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಎಚ್‌ಎಂಪಿವಿ ಎರಡು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸೋಮವಾರ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಈ ಸಂಬಂಧ ರಾಜ್ಯದಲ್ಲಿ ಆರೋಗ್ಯ ಇಲಾಖೆ ಯಾವುದೇ ಕಠಿಣಕ್ರಮಗಳನ್ನು ಕೈಗೊಳ್ಳುವುದಿಲ್ಲ. ಕೇಂದ್ರದಿಂದಲೂ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಸೂಚನೆಗಳಿಲ್ಲ. ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಐಸಿಎಂಆರ್ ಸೂಚನೆಗಳನ್ನು ಅನುಸರಿಸುತ್ತೇವೆ ಎಂದು ವಿವರಿಸಿದರು.
ಸಾಮಾನ್ಯವಾಗಿ ಐಎಲ್‌ಐ ಪ್ರಕರಣಗಳಲ್ಲಿ ಶೇ 1 ರಷ್ಟು ಜನರಲ್ಲಿ ಈ ವೈರಸ್ ಕಂಡು ಬರುತ್ತದೆ. ಇಂಥದ್ದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳನ್ನು ಪರೀಕ್ಷೆ ಮಾಡಿದಾಗ, ಎಚ್ಎಂಪಿ ವೈರಾಣು ಪತ್ತೆಯಾಗಿದೆ. ಇಬ್ಬರು ಮಕ್ಕಳಲ್ಲಿ ಮೂರು ತಿಂಗಳ ಮಗು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಎಂಟು ತಿಂಗಳ ಮಗು ಇವತ್ತು ಅಥವಾ ನಾಳೆ ಬಿಡುಗಡೆಯಾಗುತ್ತದೆ. ವೈರಸ್ ಕುರಿತು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಚೀನಾದಲ್ಲಿ ಪತ್ತೆಯಾಗಿರುವ ವೈರಸ್ ಬಗ್ಗೆ ಮಾಹಿತಿಯಿಲ್ಲ. ಆದರೆ ಇಲ್ಲಿ ಕಾಣಿಸಿಕೊಂಡಿರುವ ವೈರಸ್ ಅಪಾಯಕಾರಿಯಲ್ಲ. ಆದರೆ ಉಸಿರಾಟದ ಸಮಸ್ಯೆ ಇರುವವರು, ಮಕ್ಕಳು, ಹಿರಿಯ ನಾಗರಿಕರ ಬಗ್ಗೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.