ಬೆಂಗಳೂರು: ಗಣತಿದಾರ ಶಿಕ್ಷಕರಿಗೆ ಧಮ್ಕಿ ಹಾಕಿದ ಮುಖ್ಯಮಂತ್ರಿಗಳು ಈ ಶಿಕ್ಷಕರ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿರುವರೇ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಜನಗಣತಿ, ಜಾತಿ ಗಣತಿ, ಆರ್ಥಿಕ ಸಮೀಕ್ಷೆಯನ್ನು ಮಾಡದೇ ಇದ್ದರೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ಧಮ್ಕಿ ಹಾಕಿದ್ದಾರೆ. ಗಣತಿದಾರರ ಸಮಸ್ಯೆ ಬಗೆಹರಿಸುವ ಪ್ರಯತ್ನವಾದರೂ ಏನು ಮಾಡಿದ್ದೀರಿ? ನೆಟ್‍ವರ್ಕ್ ಸಮಸ್ಯೆ ವ್ಯಾಪಕವಾಗಿದೆ. ಇವರು ಕೊಟ್ಟ ಆ್ಯಪ್ ಸಮಸ್ಯಾತ್ಮಕವಾಗಿದೆ. ಮಾಹಿತಿ ಅಪ್‍ಲೋಡ್ ಮಾಡಲಾಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಒ.ಟಿ.ಪಿ ಸಮಸ್ಯೆ ಇದೆ. ಮನೆಗಳ ಸೀರಿಯಲ್ ಸರಿಯಾಗಿ ಕೊಟ್ಟಿಲ್ಲ. ಒಂದು ಮನೆ ಒಂದೆಡೆ, ನಂತರದ ಮನೆ ಇನ್ನೆಲ್ಲೋ ಎಂಬಂತೆ ಸಂಖ್ಯೆ ಕೊಟ್ಟಿದ್ದಾರೆ. ಒಂದು ಶಾಲೆ ಶಿಕ್ಷಕರನ್ನು ಇನ್ನೊಂದು ಪ್ರದೇಶಕ್ಕೆ ಹಾಕಿದ್ದಾರೆ. ಇದರಿಂದಲೂ ಸಮಸ್ಯೆ ಆಗುತ್ತಿದೆ. ಶಿಕ್ಷಕರ ಜೊತೆ ನೀವು ಮಾತನಾಡಿದರೆ ಸಮಸ್ಯೆ ಏನೆಂದು ಅರ್ಥವಾಗುತ್ತದೆ ಎಂದು ತಿಳಿಸಿದರು. ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದರು.
ಪೂರ್ವತಯಾರಿ, ಪ್ರಾಯೋಗಿಕ ಸಮೀಕ್ಷೆ ಮಾಡಿಲ್ಲ
ಇಂಥ ಸಮೀಕ್ಷೆ ಮಾಡಲು ಮೊದಲು ಪೂರ್ವತಯಾರಿ ಮಾಡಬೇಕು. ತರಬೇತಿ ನೀಡಬೇಕು. ಕೆಲವು ಪ್ರದೇಶಗಳಲ್ಲಿ ಮೊದಲೇ ಪ್ರಾಯೋಗಿಕ ಸಮೀಕ್ಷೆ ಮಾಡಬೇಕಿತ್ತು. ಅಲ್ಲಿ ಬರುವ ಸಮಸ್ಯೆಗಳನ್ನು ಗಮನಿಸಿ ಪರಿಹರಿಸಬೇಕಿತ್ತು ಎಂದು ಸಿ.ಟಿ.ರವಿ ಅವರು ಹೇಳಿದರು.
ಆಮೇಲೆ ಸಮೀಕ್ಷಾ ಮಾದರಿ ಮಾಡಿ ಅದನ್ನು ವಿಸ್ತರಿಸಬೇಕು. ಇಲ್ಲಿ ಪ್ರಾಯೋಗಿಕ ಸಮೀಕ್ಷೆ ಮಾಡಿಲ್ಲ. ಸೂಕ್ತ ತರಬೇತಿ ನೀಡಿಲ್ಲ; ಅದರ ಬದಲಿಗೆ ಧಮ್ಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಯುಎಚ್‍ಐಡಿಯಲ್ಲಿ ಮನೆ ಹುಡುಕುವುದೇ ಸಮಸ್ಯೆಯಾಗಿದೆ ಎಂದು ವಿವರಿಸಿದರು.
ಗುಡ್ಡಗಾಡು- ಮಲೆನಾಡು ಪ್ರದೇಶಗಳಲ್ಲಿ ನೆಟ್‍ವರ್ಕ್ ದೊಡ್ಡ ಸಮಸ್ಯೆಯಾಗಿದೆ. 60 ಪ್ರಶ್ನೆಗಳನ್ನೂ ದಾಖಲಿಸಬೇಕಿದೆ. ಬಹಳಷ್ಟು ಮನೆಗಳಲ್ಲಿ 60 ಪ್ರಶ್ನೆಗಳಿಗೆ ಉತ್ತರಿಸಲು ತಾಳ್ಮೆ ಇರುವುದಿಲ್ಲ. ಅಲ್ಲೂ ಸಮಸ್ಯೆ ಆಗುತ್ತಿದೆ. ಅರ್ಜಿ ಅಪ್‍ಲೋಡ್ ಯಶಸ್ವಿಯಾಗಿಲ್ಲ ಎಂದು ತೋರಿಸುತ್ತದೆ. ಮಹಿಳಾ ಶಿಕ್ಷಕರು ಒಬ್ಬರೇ ಮನೆಗೆ ಹೋಗುವುದೂ ಕೆಲವೆಡೆ ಸಮಸ್ಯೆಗಳನ್ನು ನಿರ್ಮಾಣ ಮಾಡಿದೆ ಎಂದು ತಿಳಿಸಿದರು.
ಮಾನಸಿಕ ಒತ್ತಡ, ಕಣ್ಣಿನ ತೊಂದರೆ
ಒಂದೊಂದು ಅರ್ಜಿ ತುಂಬಿಸಲು ಎರಡೆರಡು ಗಂಟೆ ಬೇಕಾಗುತ್ತಿದೆ. ಇದರಿಂದ ಮಾನಸಿಕ ಒತ್ತಡ, ಕಣ್ಣಿನ ತೊಂದರೆಗೆ ಒಳಗಾಗಿದ್ದಾರೆ. ತುಂಬ ಜನರು ಸಮೀಕ್ಷೆಗೆ ಹೋದಲ್ಲೇ ಅನಾರೋಗ್ಯಕ್ಕೆ ಸಿಲುಕಿದ ದೂರುಗಳೂ ಬಂದಿವೆ. ಎಲ್ಲರಿಗೂ ತಾಂತ್ರಿಕ ಜ್ಞಾನ ಇರುವುದು ಸಹಜವಲ್ಲ; ಮೊಬೈಲ್ ಬಳಕೆಯಲ್ಲಿ ತಾಂತ್ರಿಕ ಜ್ಞಾನದ ಸಮಸ್ಯೆಯೂ ಕೆಲವೆಡೆ ಕಂಡುಬಂದಿದೆ ಎಂದು ವಿವರಿಸಿದರು.
ಒಂದು ಮನೆಯಲ್ಲಿ 4-5 ಜನರಿದ್ದರೆ, ಎರಡರಿಂದ ಎರಡೂವರೆ ಗಂಟೆ ಬೇಕಾಗುತ್ತದೆ. ದಿನಕ್ಕೆ ಆರರಿಂದ 8 ಮನೆ ಸಮೀಕ್ಷೆ ಮಾಡಲಷ್ಟೇ ಸಾಧ್ಯವಿದೆ. ಹೆಚ್ಚುವರಿ ಮನೆ ನೀಡಿದ್ದರ ಬಗ್ಗೆ ಪರಿಶೀಲಿಸಬೇಕಿದೆ ಎಂದು ತಿಳಿಸಿದರು. ಒಟಿಪಿಯೂ ಬರುತ್ತಿಲ್ಲ; ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಅವರು ಆಗ್ರಹಿಸಿದರು.