ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಅವ್ಯವಸ್ಥೆ ವೀಕ್ಷಿಸಲು ಖುದ್ದಾಗಿ ಸಿಎಂ ಸಿದ್ದರಾಮಯ್ಯ ರಂಗಕ್ಕಿಳಿದಿದ್ದಾರೆ.
ಇಂದು ಅಧಿಕಾರಿಗಳ ಜೊತೆ ಸಿಟಿ ರೌಂಡ್ಸ್ ಮಾಡಿದ ಸಿಎಂ ಸಿದ್ದರಾಮಯ್ಯ ರಸ್ತೆ ಗುಂಡಿ, ಮೆಟ್ರೋ ಕಾಮಗಾರಿಯಿಂದಾಗಿ ರಸ್ತೆ ಅವ್ಯವಸ್ಥೆಯಾಗಿರುವುದರ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳ ಅವ್ಯವಸ್ಥೆ ಸರಿಪಡಿಸಲು ಸೂಚನೆ ನೀಡಿದ್ದಾರೆ.
ವೈಟ್ ಟಾಪಿಂಗ್ ಅಡಿ ಅಭಿವೃದ್ಧಿಪಡಿಸಲಾದ ರಸ್ತೆಗಳಲ್ಲಿ ಗುಂಡಿಗಳು ಬಿದ್ದರೆ ಅದರ ಹೊಣೆಯನ್ನು ಗುತ್ತಿಗೆದಾರರೇ ಹೊರಬೇಕಿದೆ. ಓಮ್ಮೆ ವೈಟ್ ಟಾಪಿಂಗ್ ಗೆ ರಸ್ತೆಯನ್ನು ಒಪ್ಪಿಸಿದ ಮೇಲೆ ಆ ರಸ್ತೆಗಳ ನಿರ್ವಹಣೆಗೆ ಬಿಬಿಎಂಪಿ ಹಣ ಕೊಡಲು ಬರುವುದಿಲ್ಲ. ವೈಟ್ ಟಾಪಿಂಗ್ ಕಾಮಗಾರಿ 2-3 ವರ್ಷಗಳ ಕಾಲ ನಡೆಯಲಿದೆ. ಈ ಅವಧಿಯಲ್ಲಿ ಗುತ್ತಿಗೆದಾರರೇ ರಸ್ತೆಗಳ ನಿರ್ವಹಣೆ ಮಾಡಬೇಕು ಎಂಬ ನಿಯಮವಿದೆ.
ಆದರೆ ಬಾಗಲೂರು ರಸ್ತೆಯ ಸಮರ್ಪಕ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ವೈಟ್ ಟಾಪಿಂಗ್‌ನ ಗುತ್ತಿಗೆದಾರರು ಮತ್ತು ಎಂಜಿನಿಯರ್ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಹೆಬ್ಬಾಳ, ಹೆಣ್ಣೂರು-ಬಾಗಲೂರು ರಸ್ತೆ ಬಳಿ ಸಿಎಂ ಸಿದ್ದರಾಮಯ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹೆಣ್ಣೂರಿನ ಬಾಗಲೂರು ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ರಸ್ತೆಗುಂಡಿಗಳ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಿದ್ದಾರೆ.