Publish Date: Tue, 27 May 2025 (10:17 IST)
Updated Date: Tue, 27 May 2025 (10:25 IST)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಜನ ಲಾಖ್ ಡೌನೂ ಬೇಡ, ಶಾಲೆಗೆ ರಜಾನೂ ಬೇಡ ಎಂದು ಮನವಿ ಮಾಡುತ್ತಿದ್ದಾರೆ.
ಕಳೆದ ಬಾರ ಕೊರೋನಾದಿಂದ ಜನ ಸಾಕಷ್ಟು ಅನುಭವಿಸಿದ್ದಾರೆ. ಕೊರೋನಾ ಒಂದು ಮತ್ತು ಎರಡನೇ ಅಲೆಯಲ್ಲಿ ಲಾಕ್ ಡೌನ್ ಆಗಿ ಮಾಡಲು ಕೆಲಸವೂ ಇಲ್ಲದೇ ಜನ ಜೀವನ ನಿರ್ವಹಣೆ ಮುಂದೆ ಹೇಗೆ ಎಂದು ಪರಿತಪಡಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯ ಏನಾಗುವುದೋ ಎಂಬ ಆತಂಕಕ್ಕೀಡಾಗಿದ್ದಾರೆ.
ಹೀಗಾಗಿ ಈಗ ಕೊರೋನಾ ಮತ್ತೊಂದು ಅಲೆ ಬರುತ್ತಿರುವ ಸೂಚನೆ ಬೆನ್ನಲ್ಲೇ ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಲಾಕ್ ಡೌನೂ ಬೇಡ, ಶಾಲೆಗಳಿಗೆ ರಜೆಯೂ ಬೇಡ ಎನ್ನುತ್ತಿದ್ದಾರೆ. ಲಾಕ್ ಡೌನ್ ಎಂದು ಕಚೇರಿ, ಅಂಗಡಿ ಮುಂಗಟ್ಟುಗಳನ್ನು ಬಾಗಿಲು ಹಾಕಿ ಕೂತರೆ ಜೀವನ ನಿರ್ವಹಣೆ ಕಷ್ಟ. ಈಗಷ್ಟೇ ಹಳೆಯ ಕೊರೋನಾದಿಂದ ಚೇತರಿಸಿಕೊಂಡು ಮತ್ತೆ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಈಗ ಲಾಕ್ ಡೌನ್ ಎಂದು ಕೂತರೆ ಜೀವನ ಬರ್ಬಾದ್ ಆಗೋದು ಗ್ಯಾರಂಟಿ ಎನ್ನುತ್ತಿದ್ದಾರೆ.
ಇನ್ನು, ಕೊರೋನಾ ಸಮಯದಲ್ಲಿ ವಿದ್ಯಾಭ್ಯಾಸದ ನಿರ್ಣಾಯಕ ಹಂತದಲ್ಲಿದ್ದ ಎಷ್ಟೋ ವಿದ್ಯಾರ್ಥಿಗಳಿಗೆ ಈಗಲೂ ಕೊರೋನಾ ಬ್ಯಾಚ್ ಎನ್ನುವ ಕಾರಣಕ್ಕೆ ಉದ್ಯೋಗ ಸಿಗದೇ ಪರದಾಡುತ್ತಿರುವವರೂ ಇದ್ದಾರೆ. ಅಂತಹ ಪರಿಸ್ಥಿತಿ ಮತ್ತೆ ಬರದಿರಲಿ ಎಂದು ವಿದ್ಯಾರ್ಥಿಗಳು, ಪೋಷಕರೂ ಆತಂಕದಿಂದ ಬೇಡಿಕೊಳ್ಳುತ್ತಿದ್ದಾರೆ.