ನವದೆಹಲಿ: ಭಾರತದಲ್ಲಿ ಮುಸ್ಲಿಮರ ಜನ ಸಂಖ್ಯೆ ಪಾಕಿಸ್ತಾನದ ಮುಸ್ಲಿಮರಿಗಿಂತ ಹೆಚ್ಚಿದೆ, ನಾವು ಈ ದೇಶಕ್ಕೇ ನಿಷ್ಠರಾಗಿದ್ದೇವೆ ಎಂದು ಸಂಸದ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಜಾಗತಿಕ ರಾಷ್ಟ್ರಗಳ ಗಮನ ಸೆಳೆಯಲು ನಿಯೋಜನೆಯಾಗಿರುವ ಸರ್ವಪಕ್ಷ ಸಂಸದರ ನಿಯೋಗದ ಭಾಗವಾಗಿರುವ ಒವೈಸಿ, ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಕಿಸ್ತಾನದಲ್ಲಿರುವ ಮುಸ್ಲಿಮರಿಗಿಂತ ಹೆಚ್ಚಿನ ಮುಸ್ಲಿಮರು ಭಾರತದಲ್ಲಿದ್ದಾರೆ. ಆದರೆ ನಾವೆಲ್ಲರೂ ಭಾರತಕ್ಕೇ ನಿಷ್ಠರಾಗಿದ್ದೇವೆ. ಧರ್ಮದ ಆಧಾರದಲ್ಲಿ ನಮ್ಮನ್ನು ಟಾರ್ಗೆಟ್ ಮಾಡಲಾಗದು ಎಂದಿದ್ದಾರೆ.
ಇನ್ನು ಐಎಂಎಫ್ ಸಾಲವಾಗಿ ನೀಡಿರುವ ಹಣವನ್ನು ಪಾಕಿಸ್ತಾನ ಉಗ್ರ ಸಂಘಟನೆಗಳ ಪೋಷಣೆಗೆ ಬಳಸುತ್ತಿದೆ. ಹೀಗಾಗಿ ಇನ್ನು ಪಾಕಿಸ್ತಾನಕ್ಕೆ ಐಎಂಎಫ್ ಸಾಲ ಕೊಡಬಾರದು ಎಂದು ಆಗ್ರಹಿಸಿದ್ದಾರೆ. ಮಿಡಲ್ ಈಸ್ಟ್ ನಲ್ಲಿ ಪಾಕಿಸ್ತಾನ ಹವಾಲ ದಂಧೆ ಮೂಲಕ ಉಗ್ರರನ್ನು ಭಾರತ ವಿರೋಧ ಚಟುವಟಿಕೆಗಳಿಗೆ ಛೂ ಬಿಡುತ್ತಿದೆ ಎಂದೂ ಅವರು ಆಪಾದಿಸಿದ್ದಾರೆ.