ಬೆಂಗಳೂರು: ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೊರೋನಾ ಹಗರಣದ ಬಗ್ಗೆ ಡಿ ಕುನ್ನಾ ಆಯೋಗ ಇಂಚಿಂಚೂ ಬಯಲು ಮಾಡಿದೆ. ಜೊತೆಗೆ ಆಗ ಸಿಎಂ ಆಗಿದ್ದ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರಾಗಿದ್ದ ಬಿ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಸಲಹೆ ನೀಡಿದೆ.
ಕೊರೋನಾ ಹಗರಣದ ಬಗ್ಗೆ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ಜಸ್ಟಿಸ್ ಕುನ್ನಾ ಆಯೋಗದಿಂದ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ಕೊರೋನಾ ಕಾಲದ ಕೆಲವು ಕಡತಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಕೆ ಮಾಡಲಾಗಿದೆ. ಜೊತೆಗೆ ಯಡಿಯೂರಪ್ಪ ಮತ್ತು ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಗೆ ಸಲಹೆ ನೀಡಲಾಗಿದೆ.
ಪಿಪಿಇ ಕಿಟ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿತ್ತು ಎಂದು ಕಂಡುಬಂದಿದೆ. ಪಿಪಿಇ ಕಿಟ್ ಖರೀದಿಯಲ್ಲಿ ಪೂರೈಕೆದಾರರಿಗೆ ಅನಗತ್ಯವಾಗಿ 14.2 ಕೋಟಿ ರೂ. ಲಾಭ ಮಾಡಿಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಚೀನಾದಿಂದ ಮತ್ತು ದೇಶೀಯವಾಗಿ ಹೆಚ್ಚಿನ ಬೆಲೆಗೆ ಪಿಪಿಇ ಕಿಟ್ ಖರೀದಿ ಮಾಡಲಾಗಿತ್ತು ಎಂದು ಆಯೋಗ ಹೇಳಿದೆ.
ಸ್ಥಳೀಯ ಮಾರುಕಟ್ಟೆಗಳಿಂದ 446 ರೂ. ಗೆ ಖರೀದಿ ಮಾಡಿದ್ದ ಪಿಪಿಇ ಕಿಟ್ ಗಳನ್ನು ಚೀನಾ ಕಂಪನಿಗಳನ್ನು 2117 ರೂ. ಗೆ ಪಿಪಿಇ ಕಿಟ್ ಖರೀದಿ ಮಾಡಲಾಗಿತ್ತು. ಒಂದೇ ಮಾದರಿಯ ಪಿಪಿಇ ಕಿಟ್ ಬೆಲೆಗೆ ಇಷ್ಟೊಂದು ವ್ಯತ್ಯಾಸವಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದೀಗ ಶ್ರೀರಾಮುಲು ಆರೋಗ್ಯ ಮಂತ್ರಿಗಳಾಗಿದ್ದಾಗ ಕಡತಗಳ ಪರಶೀಲನೆ ಮಾತ್ರ ನಡೆದಿದೆ. ಇನ್ನು, ಡಾ ಸುಧಾಕರ್ ಆರೋಗ್ಯ ಮಂತ್ರಿಯಾಗಿದ್ದಾಗ ಮಾಡಿದ್ದ ವ್ಯವಹಾರಗಳ ಕಡತಗಳ ತನಿಖೆಯಾಗಬೇಕಿದೆಯಷ್ಟೇ.