ಬೆಂಗಳೂರು: ಕೋವಿಡ್ ಹಗರಣದ ತನಿಖಾ ವರದಿ ಮುಖ್ಯಮಂತ್ರಿಗಳ ಕೈಸೇರಿದೆ ಅಷ್ಟೆ. ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಮಾಜಿ ಸಚಿವ ಡಾ.ಸುಧಾಕರ್ ಕುಂಬಳಕಾಯಿ ಕಳ್ಳನಂತೆ ವರ್ತಿಸಲು ಆರಂಭಿಸಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯ ಮಾಡಿದ್ದಾರೆ..
ಈ ಸಂಬಂಧ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ವಿರೋಧ ಪಕ್ಷದಲ್ಲಿ ಇದ್ದಾಗಲೂ ಕೋವಿಡ್ ಹಗರಣದ ಬಗ್ಗೆ ತನಿಖೆಯಾಗಬೇಕು ಎಂದು ನಮ್ಮ ಪಕ್ಷ ಒತ್ತಡ ಹಾಕಿತ್ತು. ಈಗ ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಪದೇ ಪದೇ ನ್ಯಾಯಾಧೀಶರ ಮೇಲೆ ಒತ್ತಡ ಹಾಕಿದ್ದಾರೆ ಎನ್ನುವ ಅವರು ವರದಿ ಬಹಿರಂಗವಾಗುವವರೆಗೂ ಕಾಯುತ್ತಿಲ್ಲ. ನಮ್ಮ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸುತ್ತಾ ಓಡಾಡುತ್ತಿದ್ದಾರೆ. ತಪ್ಪು ಮಾಡಿಲ್ಲ ಎಂದು ನಂಬಿಕೆಯಿದ್ದರೆ ಆಡಳಿತ ಪಕ್ಷದ ಮೇಲೆ ಕಿಡಿಕಾರುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಹಿಂದಿನ ಸರ್ಕಾರದಲ್ಲಿ ಪರ್ಸಂಟೇಜ್ ಭ್ರಷ್ಟಾಚಾರ ಇತ್ತು ಎಂದು ಮಾಧ್ಯಮಗಳ ಮುಂದೆಯೇ ಒಪ್ಪಿಕೊಂಡಿರುವ ಸುಧಾಕರ್ ಅವರಿಗೆ ಈ ಕೋವಿಡ್ ತನಿಖಾ ವರದಿ ತಮ್ಮ ಕೊರಳಿಗೆ ಉರುಳಾಗುವ ಬಗ್ಗೆ ಮುನ್ಸೂಚನೆ ಸಿಕ್ಕಿದೆಯೇ ಅನ್ನಿಸುತ್ತದೆ ಎಂದಿದ್ದಾರೆ.
ಇನ್ನೇನು ಸಂಪುಟ ಸಭೆಯಲ್ಲಿ ಕೋವಿಡ್ ತನಿಖಾ ವರದಿ ಬಹಿರಂಗವಾಗಲಿದೆ. ವರದಿಯಲ್ಲಿ ಏನಿದೆ ಎಂಬುದರ ಮೇಲೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಆದರೂ, ಸಂಸದ ಸುಧಾಕರ್ ಅವರು ತಮ್ಮ ಹೆಗಲನ್ನು ಮುಟ್ಟಿ ನೋಡಿಕೊಳ್ಳುತ್ತಾ ತಮ್ಮ ತಪ್ಪು ಇದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆಯೇ ಎಂದರು.