Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಕನಸು ನನಸು ಮಾಡಿಕೊಂಡ ಜೋಡಿಗಳು

ಅಣ್ಣಾವ್ರ ಮುಂದೆ ಹಾರ ಬದಲಿಸಿಕೊಂಡ ಜೋಡಿಗಳು

webdunia
ಸೋಮವಾರ, 12 ಜುಲೈ 2021 (08:11 IST)
Bangalore : ಡಾ. ರಾಜ್ಕುಮಾರ್ ಅಭಿಮಾನಿಗಳನ್ನೇ ದೇವರು ಅಂದವರು. ಆದರೆ ಅಭಿಮಾನಿಗಳ ಪಾಲಿಗೆ ಅವರೇ ದೇವರು. ಹೀಗಾಗಿಯೇ ಡಾ. ರಾಜ್ಕುಮಾರ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ.

ಕನ್ನಡಿಗರ ಪಾಲಿಗೆ `ಡಾ. ರಾಜ್ಕುಮಾರ್' ಕೇವಲ ಒಂದು ಹೆಸರಲ್ಲ. ಅದು ಒಂದು ಶಕ್ತಿ. ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡದ ಅಸ್ಮಿತೆ. ಅದ್ಭುತ ನಟನೆ, ಅತ್ಯುದ್ಭುತವಾದ ವ್ಯಕ್ತಿತ್ವ, ಸರಳತೆಯ ಮೂಲಕ ಪ್ರತಿಯೊಬ್ಬ ಕನ್ನಡಿಗರ ಮನ, ಮನೆ ತಲುಪಿದ ಖ್ಯಾತಿ ಅಣ್ಣಾವ್ರದ್ದು. ಹೀಗಾಗಿಯೇ ಅವರು ಇಂದು ನಮ್ಮಿಂದ ದೂರಾಗಿದ್ದರೂ, ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಚಿರವಾಗಿ ಉಳಿದಿದ್ದಾರೆ. ಈಗಲೂ ಡಾ. ರಾಜ್ಕುಮಾರ್ ಅಪ್ಪಾಜಿಯನ್ನು ಲಕ್ಷಾಂತರ ಜನ ದೇವರಂತೆ ಪೂಜಿಸುತ್ತಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಸ್ಮಾರಕಕ್ಕೆ ದೂರದ ಊರುಗಳಿಂದ, ಹೊರ ರಾಜ್ಯಗಳಿಂದಲೂ ಬರುವ ಅಣ್ಣಾವ್ರ ಅಭಿಮಾನಿಗಳಿಗೇನೂ ಕೊರತೆ ಇಲ್ಲ.
ಅಷ್ಟೇ ಯಾಕೆ ಅಣ್ಣಾವ್ರ ಸ್ಮಾರಕದ ಬಳಿಯೇ ನಿಶ್ಚಿತಾರ್ಥ ಮಾಡಿಕೊಳ್ಳಬೇಕು, ಮದುವೆ ಆಗಬೇಕು, ಮಗುವಿಗೆ ನಾಮಕರಣ ಮಾಡಬೇಕು ಅನ್ನೋ ಆಸೆ ಹಲವಾರು ಅಭಿಮಾನಿಗಳದ್ದು. ಅರ್ಥಾತ್ ತಮ್ಮ ಮನೆಯಲ್ಲಿ ಏನೇ ಶುಭ ಕಾರ್ಯ ನಡೆದರೂ ಅಣ್ಣಾವ್ರ ಸಮ್ಮುಖದಲ್ಲಿ ಆಗಬೇಕು, ಅವರ ಆಶೀರ್ವಾದ ಪಡೆದೇ ಆಗಬೇಕು ಅನ್ನುವಷ್ಟು ಪ್ರೀತಿ, ಅಭಿಮಾನ, ಗೌರವ ಅಭಿಮಾನಿಗಳಲ್ಲಿ. ಹಾಗೇ ಮೊದಲಿಂದಲೂ ಹಲವು ಕಾರ್ಯಕ್ರಮಗಳು, ಸಮಾರಂಭಗಳು ಡಾ. ರಾಜ್ ಸ್ಮಾರಕದ ಬಳಿ ನಡೆಯುತ್ತಿದ್ದವು. ಆದರೆ ಕಳೆದ ಒಂದೂವರೆ ವರ್ಷಗಳಿಂದ ಕೊರೊನಾ ಅಟ್ಟಹಾಸದಿಂದಾಗಿ ಲಾಕ್ಡೌನ್ ಘೋಷಣೆ ಮಾಡಲಾಗಿದ್ದ ಕಾರಣ, ಇಂತಹ ಯಾವುದೇ ಕಾರ್ಯಕ್ರಮಗಳೂ ನಡೆದಿರಲಿಲ್ಲ. ಮಾತ್ರವಲ್ಲ ಅಣ್ಣಾವ್ರ ಪುಣ್ಯ ಸ್ಮರಣೆ ಹಾಗೂ ಹುಟ್ಟುಹಬ್ಬಕ್ಕೂ ಅಭಿಮಾನಿಗಳು ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಣ್ಣಾವ್ರ ಅಭಿಮಾನಿಗಳು ಲಾಕ್ಡೌನ್ ಅನ್ಲಾಕ್ ಆಗಲು ಕಾತರದಿಂದ ಕಾಯುತ್ತಿದ್ದರು.
ಹೀಗೆ ಲಾಕ್ಡೌನ್ ಅನ್ಲಾಕ್ ಆಗಲಿ ಅಂತ ಆ ಐದೂ ಜೋಡಿಗಳೂ ಕಾಯುತ್ತಿದ್ದರು. ಮೂಲತಃ ಬೆಂಗಳೂರಿನವರೇ ಆದ ಈ ನವದಂಪತಿಗಳು ಅಣ್ಣಾವ್ರ ಕಟ್ಟಾ ಅಭಿಮಾನಿಗಳು. ಅದು ಎಷ್ಟರ ಮಟ್ಟಿಗೆ ಅಂದ್ರೆ ಮದುವೆ ಅಂತ ಆದರೆ ಅಣ್ಣಾವ್ರ ಸಮ್ಮುಖದಲ್ಲೇ ಆಗಬೇಕು ಅಂತ ತೀರ್ಮಾನಿಸಿದ್ದರಂತೆ. ಆದರೆ ಕಳೆದ ಒಂದೂವರೆ ವರ್ಷದಿಂದ ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ ಆ ಕನಸು ಈಡೇರಿರಲಿಲ್ಲ. ಸರಳವಾಗಿ ಮದುವೆ ಮಾಡಿಕೊಂಡಿದ್ದರು. ಹೀಗಾಗಿಯೇ ಈಗ ಲಾಕ್ಡೌನ್ ಅನ್ಲಾಕ್ ಆಗಿದ್ದೇ ತಡ ಅಣ್ಣಾವ್ರ ಸ್ಮಾರಕಕ್ಕೆ ಧಾವಿಸಿದ್ದರು. ಐದೂ ಜೋಡಿಗಳೂ ಮತ್ತೆ ಹಸೆಮಣೆ ಏರುವಂತೆ ಸಿಂಗಾರಗೊಂಡಿದ್ದರು. ಐವರೂ ವರರು ತಲೆಗೆ ಮೈಸೂರು ಪೇಟ ಧರಿಸಿದ್ದರೆ, ಮಧುಮಕ್ಕಳು ಹೊಸ ಸೀರೆ ಧರಿಸಿ ಮಿಂಚುತ್ತಿದ್ದರು.
ಐದೂ ಜೋಡಿಗಳೂ ಡಾ. ರಾಜ್ ಸ್ಮಾರಕದ ಬಳಿ ಮತ್ತೆ ಹಾರ ಬದಲಿಸಿಕೊಂಡು ತಮ್ಮ ಕನಸನ್ನು ನನಸಾಗಿಸಿಕೊಂಡರು. ಜೊತೆಗೆ ಅಣ್ಣಾವ್ರಂತೆಯೇ ತಾವೂ ನೇತ್ರದಾನ ಮಾಡುವ ಮೂಲಕ ವಿಶೇಷವಾಗಿ ಅಭಿಮಾನ ಮೆರೆದರು. ನಾರಾಯಣ ನೇತ್ರಾಲಯದ ವತಿಯಿಂದ ವೀರೇಶ್ ಎಂಬುವವರು ಎಲ್ಲರಿಂದ ನೇತ್ರದಾನ ಮಾಡುವ ಬಗ್ಗೆ ಹೆಸರುಗಳನ್ನು ನೋಂದಣಿ ಮಾಡಿಸಿಕೊಂಡು, ಸಹಿ ಹಾಕಿಸಿಕೊಂಡರು. ನಿನ್ನೆ ಭಾನುವಾರ ನಡೆದ ಈ ಶುಭ ಕಾರ್ಯದಲ್ಲಿ ಹಲವಾರು ಮಂದಿ ಡಾ. ರಾಜ್ ಅಭಿಮಾನಿಗಳೂ ಭಾಗವಹಿಸಿದ್ದರು


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ರಾಜ್ಯದಲ್ಲಿ ಮುಂದುವರೆದ ಮಳೆಯ ಅಬ್ಬರ