Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಮುಂದುವರೆದ ಮಳೆಯ ಅಬ್ಬರ

ವಿವಿಧ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ರಾಜ್ಯದಲ್ಲಿ ಮುಂದುವರೆದ ಮಳೆಯ ಅಬ್ಬರ
ಚಿಕ್ಕಮಗಳೂರು , ಸೋಮವಾರ, 12 ಜುಲೈ 2021 (08:04 IST)
ಚಿಕ್ಕಮಗಳೂರು : ಕರ್ನಾಟಕ ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ರೈತನ ಮೊಗದಲ್ಲಿ ಸಂತಸ ಮೂಡಿದೆ. ಜೂನ್ ತಿಂಗಳ ಅರ್ಧಕ್ಕೆ ಮಳೆ ಕೈಕೊಟ್ಟು ಆತಂಕಕ್ಕೆ ಕಾರಣವಾಗಿತ್ತು. ಆದರೆ ಕಳೆದ ಒಂದು ವಾರದಿಂದ ಮಳೆ ಚುರುಕುಗೊಂಡಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದ್ದು ನದಿಗಳು ಮೈತುಂಬಿ ಹರಿಯುತ್ತಿವೆ.

ಜುಲೈ 12ರಂದು ವಿವಿಧ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿ ಜಿಲ್ಲಾಡಳಿತಗಳು ಆದೇಶ ಹೊರಡಿಸಿವೆ.  ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ  ಸೋಮವಾರ ಮತ್ತು ಮಂಗಳವಾರ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 15ರ ತನಕ ಮಳೆ ಆರ್ಭಟ ಕರಾವಳಿ ಜಿಲ್ಲೆಗಳಲ್ಲಿ ಮುಂದುವರೆಯಲಿದೆ. ಸಮುದ್ರದಲ್ಲಿ 3.3 ಮೀಟರ್ ತನಕ ಅಲೆಗಳು ಏಳುವ ನಿರೀಕ್ಷೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ಭಾನುವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಉತ್ತಮ  ಮಳೆಯಾಗುತ್ತಿದೆ. ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಕೂಡ ವರುಣನ ಆರ್ಭಟ ಮುಂದುವರೆದಿದ್ದು ಅನೇಕ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಘಟನೆಗಳು ವರದಿಯಾಗಿವೆ. ಹವಾಮಾನ ಇಲಾಖೆ ಮುಂದಿನ ಎರಡು ದಿನಗಳ ಕಾಲ ರಾಜ್ಯಾದ್ಯಂತ ಭಾರಿ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ನೀಡಿದೆ. ಮುಂದಿನ ಒಂದು ವಾರ ಕರಾವಳಿ, ಮಲೆನಾಡಿನಲ್ಲಿ ಮಳೆ ಮುಂದುವೆರೆಯುವ ನಿರೀಕ್ಷೆ ಇದೆ. ಜಿಲ್ಲಾಡಳಿತಗಳಿಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ, ಬೆಂಗಳೂರಿನಲ್ಲಿಯೂ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು ಶೀತದ ವಾತಾವರಣ ಇದೆ. ಮಳೆಯ ವಾತಾವರಣ ಮುಂದಿನ ಒಂದು ವಾರ ಹೀಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕಳೆದೆರಡು ದಿನಗಳಿಂದ ಕೃಷ್ಣಾ ನದಿ ಅಚ್ಚುಕಟ್ಟಿನ ಪ್ರದೇಶದಲ್ಲಿ ಬಿಡುವು ನೀಡದ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಿದ್ದು ಆಲಮಟ್ಟಿ ಭಾಗದ ರೈತರು ಸಂತೋಷಗೊಂಡಿದ್ದಾರೆ.
ಸಮುದ್ರಕ್ಕೆ ಇಳೀಯಬೇಡಿ ಮೀನುಗಾರರೇ
ಜುಲೈ 15ರ ತನಕ ಮಳೆ ಆರ್ಭಟ ಕರಾವಳಿ ಜಿಲ್ಲೆಗಳಲ್ಲಿ ಮುಂದುವರೆಯಲಿದೆ. ಸಮುದ್ರದಲ್ಲಿ 3.3 ಮೀಟರ್ ತನಕ ಅಲೆಗಳು ಏಳುವ ನಿರೀಕ್ಷೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಜಿಲ್ಲೆಯ ಬಂಟ್ವಾಳ, ಸುಳ್ಯ, ಮಂಗಳೂರಿನಲ್ಲಿ ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗೆ ಉರುಳಿವೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಉಡುಪಿ ಜಿಲ್ಲೆಯಲ್ಲೂ ಮಳೆ ಮುಂದುವರೆದಿದ್ದು,ಕಾರ್ಕಳ, ಹೆಬ್ರಿ, ಕಾಪು ಮತ್ತು ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಶೃಂಗೇರಿ, ಕೊಪ್ಪ ಮತ್ತು ಎನ್. ಆರ್. ಪುರದಲ್ಲಿ ಮಳೆ ಸುರಿದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿಯ ಕೋಣಂದೂರು, ಸೊರಬ, ಶಿಕಾರಿಪುರದಲ್ಲಿ ಸಾಧಾರಣ ಮಳೆಯಾಗಿದ್ದರೆ, ಹೊಸನಗರಲ್ಲಿ ಮಳೆಯಾಗಿದೆ.  ಬೀದರ್ನಲ್ಲಿ ಮಾಂಜ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಸಂತಪುರ-ಠಾಣಾಕುಶನೂರ ನಡುವಿನ ರಸ್ತೆ ಕೊಚ್ಚಿ ಹೋಗಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ. ನದಿ ಪಾತ್ರದ ತಗ್ಗು ಪ್ರದೇಶದ ಜನರಿಗೆ ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತೈಲ ಬೆಲೆ ಏರಿಕೆ ….!