Select Your Language

Notifications

webdunia
webdunia
webdunia
webdunia

ಕೊರೊನಾ ವೈರಸ್ : ತುರ್ತುಸಭೆ ನಡೆಸಿದ್ಯಾಕೆ?

ಕೊರೊನಾ ವೈರಸ್ : ತುರ್ತುಸಭೆ ನಡೆಸಿದ್ಯಾಕೆ?
ಕಲಬುರಗಿ , ಬುಧವಾರ, 4 ಮಾರ್ಚ್ 2020 (21:35 IST)
ಮಾರಣಾಂತಿಕ ಕೊರೋನಾ ವೈರಸ್ ತ್ವರಿತವಾಗಿ ಹರಡುತ್ತಿದ್ದು, ಭಾರತದಲ್ಲೂ ಈ ವೈರಸ್ ಹರಡಿರುವ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. 


ಕಲಬುರಗಿ ಜಿಲ್ಲೆಯಲ್ಲಿ ವೈರಸ್ ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಯಾರೂ ಕೂಡ ಈ ಬಗ್ಗೆ ಆತಂಕಕ್ಕೊಳಗಾಗಬಾರದು ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್.ಬಿ. ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ.

ಸಾರ್ವಜನಿಕರು ಕೊರೋನಾ ವೈರಸ್ ಕುರಿತು ಹೆದರುವ ಅವಶ್ಯಕತೆ ಇಲ್ಲ. ಬದಲಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಸೀನುವಾಗ ಕರವಸ್ತ್ರವನ್ನು ಬಳಸಬೇಕು. ಮಾಸ್ಕ್ ಬಳಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಕಣ್ಣು, ಮೂಗು, ಬಾಯಿಗೆ ಪದೇ ಪದೆ ಕೈಹಾಕಬಾರದು ಎಂದು ಹೇಳಿದ ಅವರು, ಆಗಾಗ ಕೈತೊಳೆಯುತ್ತಿರಬೇಕು. ನೆಗಡಿ, ಕೆಮ್ಮು, ಜ್ವರ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು, ಸ್ವಯಂಕೃತವಾಗಿ ಮನೆಯಲ್ಲೇ ಚಿಕಿತ್ಸೆಗೆ ಮುಂದಾಗಬಾರದು ಎಂದು ಸಲಹೆ ನೀಡಿದರು.

ಜಿಲ್ಲೆಯಾದ್ಯಂತ ಕೊರೋನಾ ವೈರಸ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಈ ಕಾರ್ಯದಲ್ಲಿ ಮಾಧ್ಯಮದವರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಅವರು ಕೋರಿದರು.

ಜಿಲ್ಲೆಯ ಸಾರ್ವಜನಿಕರಲ್ಲಿ ಕರೋನಾ ವೈರಸ್ ಕುರಿತು ಕಳೆದ ಫೆಬ್ರುವರಿಯಲ್ಲಿ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಮಾಹಿತಿ ನೀಡಲಾಗಿತ್ತು. ಇದೀಗ ಜನನಿಬಿಡ ಪ್ರದೇಶಗಳಾದ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್‍ಗಳಲ್ಲಿ ಹಾಗೂ ರೇಡಿಯೋಗಳಲ್ಲಿ ಜಾಹಿರಾತು ನೀಡುವ ಮೂಲಕ ವೈರಸ್ ಹರಡುವ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಸೋಂಕಿತರಿಗಾಗಿ ಪ್ರತ್ಯೇಕ 5 ಹಾಸಿಗೆಗಳ ವಾರ್ಡ್, ಇಎಸ್‍ಐ ಆಸ್ಪತ್ರೆಯಲ್ಲಿ 6 ಪ್ರತ್ಯೇಕ ಬೆಡ್, ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಯಲ್ಲಿ 2 ಹಾಸಿಗೆಯ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ 6 ತಂಡಗಳನ್ನು ನೇಮಿಸಲಾಗಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯಶಿಕ್ಷಕರ, ಶಿಕ್ಷಕರ ಬಡ್ತಿಗಾಗಿ ಕೌನ್ಸ್ ಲಿಂಗ್ ಶುರು