ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕರು ಸೇರಿದಂತೆ ಎಲ್ಲರೂ ಮಾತನಾಡುತ್ತಿದ್ದು, ಉತ್ತಮ ಆಡಳಿತಕ್ಕೆ ಕಾಂಗ್ರೆಸ್ ಬರಬೇಕೆಂದು ಬಯಸುತ್ತಿದ್ದಾರೆ. ಇಂತಹ ಅವಕಾಶವನ್ನು ನಾವು ಬಳಸಿಕೊಳ್ಳಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ರವಿವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಪಕ್ಷದ ವತಿಯಿಂದ ನಾವು ಚುನಾವಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮೀಕ್ಷೆ ನಡೆಸಿದ್ದು, ವರದಿ ಪಕ್ಷದ ಪರವಾಗಿದೆ. ಸಮೀಕ್ಷೆ ಪಕ್ಕಕ್ಕಿಟ್ಟರೂ ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿಯವರು ಎಷ್ಟು ಗೆದ್ದಿದ್ದಾರೋ ನಾವು ಅಷ್ಟೇ ಗೆದ್ದಿದ್ದೇವೆ. ಪರಿಷತ್ ಚುನಾವಣೆಯಲ್ಲೂ ಪಕ್ಷ ಸಾಧನೆ ಮಾಡಿದೆ. ನಮ್ಮ ಸರಕಾರ ಇದ್ದಾಗ ಮಂಡ್ಯ, ತುಮಕೂರಿನಲ್ಲಿ ಪಕ್ಷ ಸೋತಿತ್ತು. ಈ ಬಾರಿ ಗೆದ್ದಿದ್ದೇವೆ. ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ನಾವು ಗೆದ್ದಿರಲಿಲ್ಲ. ಈಗ ಗೆದ್ದಿದ್ದೇವೆ. ಚುನಾಯಿತ ಪ್ರತಿನಿಧಿಗಳು ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದರು. ಇದೀಗ ವಿದ್ಯಾವಂತರು, ಶಿಕ್ಷಕರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಇದು ಜನರ ಅಭಿಪ್ರಾಯ ಏನು ಎಂಬುದನ್ನು ತಿಳಿಸುತ್ತಿದೆ' ಎಂದು ವಿವರಣೆ ನೀಡಿದರು.