Publish Date: Mon, 26 Nov 2018 (16:51 IST)
Updated Date: Mon, 26 Nov 2018 (16:55 IST)
ಕಲಿಯುಗ ಕರ್ಣ, ರಾಜಕೀಯ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಪ್ ಅವ್ರಿಗೆ ಕಾಂಗ್ರೆಸ್ ಕಾರ್ಯಕರ್ತರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಸ್ಯಾಂಡಲ್ ವುಡ್ ಹಿರಿಯ ನಟ ಅಂಬರೀಶ್ ಹಾಗೂ ಕಾಂಗ್ರೆಸ್ ನ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಪ್ ವಿಧಿವಶರಾದ ಹಿನ್ನಲೆ ಕೋಲಾರ ನಗರದ ಡಿಸಿಸಿ ಬ್ಯಾಂಕ್ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾಧ್ಯಕ್ಷ ಕೆ. ಚಂದ್ರರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಅಗಲಿದ ಇಬ್ಬರು ನಾಯಕರಿಗೆ ಪುಷ್ಪ ನಮನ ಸಲ್ಲಿಸಿದರು.
ಮೌನಚರಣೆ ನೆರವೇರಿಸಿ ಶ್ರದ್ದಾಂಜಲಿ ಸಲ್ಲಿಸಿದರು. ಇದೇ ವೇಳೆ ಅಗಲಿದ ಇಬ್ಬರು ನಾಯಕರನ್ನು ನೆನೆದು ಜಿಲ್ಲೆಗೆ ಅವರು ನೀಡಿದ ಕೊಡುಗೆ ಬಗ್ಗೆ ಸ್ಮರಿಸಿದರು. ಕೋಲಾರ-ಚಿಕ್ಕಬಳ್ಳಾಪುರ ನಡುವಿನ ಅವಸಾನದ ಅಂಚಿನಲ್ಲಿದ್ದ ನ್ಯಾರೋಗೇಜ್ ರೈಲು ಮಾರ್ಗವು ಬ್ರಾಡ್ಗೇಜ್ ಆಗಿ ಪರಿವರ್ತನೆಯಾಗಿ ಭವಿಷ್ಯದಲ್ಲಿ ಈಶಾನ್ಯ ರಾಜ್ಯಗಳ ರೈಲ್ವೆ ಸಂಪರ್ಕದ ಕನಸು ಕಾಣಲು ಮೂಲ ಕಾರಣ ಜಾಫರ್ ಷರೀಪ್ ಎಂದರು. ಇನ್ನು ಕೋಲಾರದ ಚನ್ನಯ್ಯ ರಂಗಮಂದಿರ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನ ನಿರ್ಮಾಣಕ್ಕೆ ನಟ ಅಂಬರೀಶ್ ಸಹಾಯ ಹಸ್ತವೇ ಕಾರಣ ಎಂದರು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಲಿಲ್ಲದ ಸರದಾರ ಅಂಬರೀಶ್ ಹಾಗೂ ಮಾಜಿ ಕೇಂದ್ರ ಸಚಿವ ಜಾಫರ್ ಷರೀಪ್ ಅವ್ರಿಗೆ ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.