Publish Date: Tue, 10 Mar 2026 (10:26 IST)
Updated Date: Tue, 10 Mar 2026 (10:30 IST)
ಬೆಂಗಳೂರು: ಇಸ್ರೇಲ್ ಇರಾನ್ ಯುದ್ಧದ ಪರಿಣಾಮ ರಾಜ್ಯಕ್ಕೂ ತಟ್ಟಿದೆ. ಇದೀಗ ಬೆಂಗಳೂರಿನ ಹೋಟೆಲ್ ಮಾಲಿಕರು ಇಂದು ಕಮರ್ಷಿಯಲ್ ಸಿಲಿಂಡರ್ ಪೂರೈಕೆಯಾಗದೇ ಇದ್ದರೆ ಹೋಟೆಲ್ ಬಂದ್ ಮಾಡಬೇಕಾಗಬಹುದು ಎನ್ನುತ್ತಿದ್ದಾರೆ.
ಕೇಂದ್ರ ಸರ್ಕಾರವೇನೋ ಸಾಕಷ್ಟು ಅನಿಲ ದಾಸ್ತಾನು ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ಗೂ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ ಎನ್ನುತ್ತಿದೆ. ಆದರೆ ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಹೋಟೆಲ್ ಮಾಲಿಕರು ಮುಚ್ಚಬೇಕಾದ ಪರಿಸ್ಥಿತಿ ಬಂದಿದೆ ಎನ್ನುತ್ತಿದ್ದಾರೆ.
ಹಾಗಿದ್ದರೆ ಇದರ ನಡುವೆ ಕಮರ್ಷಿಯಲ್ ಸಿಲಿಂಡರ್ ವಿತರಣೆ ತಡೆಹಿಡಿಯುತ್ತಿರುವವರು ಯಾರು ಎಂಬ ಅನುಮಾನವೂ ಇದೆ. ಕೇವಲ ವಾಣಿಜ್ಯ ಬಳಕೆ ಸಿಲಿಂಡರ್ ಮಾತ್ರವಲ್ಲ, ಗೃಹ ಬಳಕೆ ಸಿಲಿಂಡರ್ ನಲ್ಲೂ ವ್ಯತ್ಯಯ ಕಂಡುಬಂದಿದೆ.
ಮೊದಲಿನಂತೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ತಕ್ಷಣ ಡೆಲಿವರಿ ಆಗುತ್ತಿಲ್ಲ ಎಂಬ ಅಳಲು ಗ್ರಾಹಕರಿಂದ ಕೇಳಿಬರುತ್ತಿದೆ. ಸಾಕಷ್ಟು ಸಿಲಿಂಡರ್ ಸಿಗದೇ ವಿತರಕರು ಗ್ರಾಹಕರಿಗೆ ಸಮಜಾಯಿಷಿ ಕೊಟ್ಟು ಬೇಸತ್ತಿದ್ದಾರೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ನೆರೆಯ ತಮಿಳುನಾಡಿನಲ್ಲೂ ಇದೇ ಪರಿಸ್ಥಿತಿ. ಬೆಂಗಳೂರಿನಂತೇ ಚೆನ್ನೈನಲ್ಲೂ ಹೋಟೆಲ್ ಗಳು ಬಂದ್ ಆಗುವ ಪರಿಸ್ಥಿತಿಯಾಗಿದೆ. ವಿತರಕರು ಸಿಲಿಂಡರ್ ವಿತರಣೆ ಮಾಡುವುದನ್ನೇ ನಿಲ್ಲಿಸಿದ್ದಾರೆ. ಹೀಗಾಗಿ ರೆಸ್ಟೋರೆಂಟ್ ಬಂದ್ ಮಾಡಬೇಕಾಗಿದೆ ಎಂದು ಹೋಟೆಲ್ ಅಸೋಸಿಯೇಷನ್ ಸರ್ಕಾರಕ್ಕೆ ಸಮಸ್ಯೆ ಹೇಳಿಕೊಂಡಿದೆ.