ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ತಾಳಿದೆ. ಈ ನಡುವೆ ಹಿಂದೂಗಳನ್ನು ಮನೆಯಿಂಧ ಹೊರಗೆಳೆದು ಹತ್ಯೆ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ವಕ್ಫ್ ಕಾಯಿದೆ ವಿಚಾರದಲ್ಲಿ ವಿರೋಧ ಪಕ್ಷಗಳು ಮುಸ್ಲಿಮರ ದಾರಿ ತಪ್ಪಿಸುತ್ತಿದೆ. ವಕ್ಫ್ ಕಾನೂನು ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಅವರು ಮುರ್ಷಿದಾಬಾದ್ ನಲ್ಲಿ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
ವಕ್ಫ್ ಹೆಸರಿನಲ್ಲಿ ಪಶ್ಚಿಮ ಬಂಗಾಲದಲ್ಲಿ ಸಾವಿರಾರು ಎಕರೆ ದಲಿತರ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಮುರ್ಷಿದಾಬಾದ್ ನಲ್ಲಿ ಹಿಂದೂಗಳನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಇವರೆಲ್ಲಾ ಯಾರು? ಈ ಭೂಮಿಯಿಂದ ಹೆಚ್ಚು ಲಾಭ ಪಡೆಯುವವರು ದಲಿತರು, ಬಡ ಹಿಂದೂಗಳು ಎಂದು ಅವರಿಗೆ ಗೊತ್ತಿದೆ. ಬಡವರು ಬಹುಮಹಡಿ ಕಟ್ಟಡಗಳನ್ನು ಕಟ್ಟಿದರೆ ಅವರ ಮತಬ್ಯಾಂಕ್ ಗೆ ಧಕ್ಕೆಯಾಗುತ್ತದೆ. ಇದೇ ಕಾರಣಕ್ಕೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೂಡಾ ಇದೇ ಆರೋಪ ಮಾಡಿದ್ದಾರೆ. ಧುಲಿಯಾನ, ಮುರ್ಷಿದಾಬಾದ್ ನಲ್ಲಿ ಸುಮಾರು 400 ಕ್ಕೂ ಹೆಚ್ಚು ಹಿಂದೂಗಳನ್ನು ಮನೆ ಬಿಟ್ಟು ಓಡಿಸಲಾಗಿದೆ. ಪ್ರಾಣ ಭೀತಿಯಿಂದ ಹಿಂದೂಗಳು ಇಲ್ಲಿಂದ ಓಡಿ ಹೋಗಿದ್ದಾರೆ ಎಂದಿದ್ದಾರೆ.