Select Your Language

Notifications

webdunia
webdunia
webdunia
webdunia

ದಸರಾ ಎನ್ನುವುದು ಒಂದೇ ಜಾತಿ, ಧರ್ಮಕ್ಕೆ ಸೀಮಿತವಾದುದಲ್ಲ: ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ಸಿಂಧನೂರು , ಶನಿವಾರ, 5 ಅಕ್ಟೋಬರ್ 2024 (10:02 IST)
ಸಿಂಧನೂರು: ಕಲ್ಯಾಣ ಕರ್ನಟಕದಲ್ಲಿ ಖಾಲಿ ಇದ್ದ 109000 ಹುದ್ದೆಗಳಲ್ಲಿ 79000 ಹುದ್ದೆ ಭರ್ತಿ ಮಾಡಿದ್ದೇವೆ. ಉಳಿದದ್ದನ್ನು ಕೂಡ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು. 
 
ಮೊಟ್ಟ ಮೊದಲ ಬಾರಿಗೆ ಆರಂಭಿಸಲಾದ ವೈಭವದ ಸಿಂಧನೂರು ದಸರಾ ಉತ್ಸವವನ್ನು ಉದ್ಘಾಟಿಸಿ,  ಮುಖ್ಯವೇದಿಕೆಯಲ್ಲಿ  1695.85 ಕೋಟಿ ವೆಚ್ಚದ ರಾಯಚೂರು ಕಲ್ಮಲಾ ಜಂಕ್ಷನ್ ನಿಂದ ಸಿಂಧನೂರು ಬಳಿ ಬಳ್ಳಾರಿ- ಲಿಂಗಸಗೂರು ರಸ್ತೆ ವರೆಗಿನ 78.45 ಕಿಮೀ ಉದ್ದದ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.
 
ದಸರಾ ಯಾವುದೇ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಾದ ವೈಭವ ಅಲ್ಲ: ಇದು ಸರ್ವ ಜನಾಂಗದ ಸಂಭ್ರಮದ ಹಬ್ಬ. ಅಂಬಾ ದೇವಿ‌ ಕೂಡ ಚಾಮುಂಡೇಶ್ವರಿಯ ಅವತಾರ. ಇದು ಸಾಂಸ್ಕೃತಿಕ ಹಿರಿಮೆ ಮತ್ತು ಚರಿತ್ರೆಯನ್ನು ಸಾರುವ ಹಬ್ಬ ಎಂದರು. 
 
ತಾಯಿ ಅಂಬಾದೇವಿ ಮತ್ತು ಚಾಮುಂಡಿ ತಾಯಿಯ ಕೃಪೆಯಿಂದ ರಾಜ್ಯದಲ್ಲಿ ಮಳೆ, ಬೆಳೆ ಉತ್ತಮವಾಗಿದೆ. ಜಲಾಶಯ, ಕೆರೆ ಕಟ್ಟೆಗಳು ತುಂಬಿವೆ. ಹೀಗಾಗಿ ಈ ಬಾರಿ ಸಮೃದ್ಧಿ ಕಾಣಲಿದ್ದೇವೆ ಎನ್ನುವ ನಂಬಿಕೆ ನನ ಗಿದೆ ಎಂದರು. 
 
371 ಜೆ ಜಾರಿಗಾಗಿ ಕಲ್ಯಾಣ ಕರ್ನಾಟಕದ ಎಲ್ಲ ಜಾತಿ, ಧರ್ಮದ ಮಂದಿ ಒಟ್ಟಾಗಿ ಹೋರಾಟ ನಡೆಸಿದರು. ಈ ಜನ ಹೋರಾಟದ ಬೆನ್ನಿಗೆ ನಿಂತು ಮಲ್ಲಿಕಾರ್ಜುನ ಖರ್ಗೆ ಅವರು 371 ಜೆ ಜಾರಿ ಮಾಡಿಸಿದರು ಎಂದು ವಿವರಿಸಿದರು.
 
371 ಜೆ ಜಾರಿಯಾಗಿ ದಶಮಾನೋತ್ಸವ ಪ್ರಯುಕ್ತ ನಾವು ಕಲ್ಬುರ್ಗಿಯಲ್ಲಿ ವಿಶೇಷ ಕ್ಯಾಬಿನೆಟ್ ನಡೆಸಿ ಅದೊಂದೇ ದಿನ 11770 ಕೋಟಿ ಯೋಜನೆಗಳಿಗೆ ಮಂಜೂರಾತಿ ನೀಡಿದ್ದೇವೆ ಎಂದು ಮುಖ್ಯಮಂತ್ರಿಗಳು ವಿವರಿಸುತ್ತಿದ್ದಂತೆ ನೆರೆದಿದ್ದ ಜನತೆ ಜೋರು ಚಪ್ಪಾಳೆಯ ಜೊತೆಗೆ ಸ್ವಾಗತಿಸಿದರು. 
 
ನಾನು ಬಜೆಟ್ ನಲ್ಲಿ ಕಳೆದ ವರ್ಷ 3000 ಕೋಟಿ, ಈ ವರ್ಷ 5000 ಕೋಟಿಯನ್ನು  ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಘೋಷಿಸಿದ್ದೇನೆ. ಪ್ರಾದೇಶಿಕ ಅಸಮಾನತೆ ಸರಿದೂಗಿಸುವ ಕಾರಣಕ್ಕೆ 
 
ಕಲ್ಯಾಣ ಕರ್ನಟಕದಲ್ಲಿ ಖಾಲಿ ಇದ್ದ 109000 ಹುದ್ದೆಗಳಲ್ಲಿ 79000 ಹುದ್ದೆ ಭರ್ತಿ ಮಾಡಿದ್ದೇವೆ. ಉಳಿದದ್ದನ್ನು ಕೂಡ ಭರ್ತಿ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದ ಸಿಎಂ ಸಿದ್ದರಾಮಯ್ಯ ಅವರು, ಇದೆಲ್ಲಾ ಸಾಧ್ಯವಾಗಿದ್ದು 371 ಜೆ ಯಿಂದ. ಇದನ್ನು ಜಾರಿಗೆ ಸಹಕರಿಸಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ನಾವೆಲ್ಲಾ ಸ್ಮರಿಸಬೇಕು ಎಂದರು. 
 
ಮತೆ ಇದೆಂಗಾಯ್ತು ಹೇಳ್ರಪಾ:  BJP ಗೆ ಸಿಎಂ ವ್ಯಂಗ್ಯ
 
ಗ್ಯಾರಂಟಿಗಳಿಂದಾಗಿ  ಬೇರೆ ಅಭಿವೃದ್ಧಿಗೆ ಹಣ ಇಲ್ಲ, ಹಣ ಇಲ್ಲ ಅಂತ BJP ಅಪಪ್ರಚಾರ ಮಾಡ್ತಿದಾರಲ್ಲಾ ಹಾಗಿದ್ರೆ ಈಗ ಉದ್ಘಾಟಿಸಿದ 1695 ಕೋಟಿ ಹಣ ಎಲ್ಲಿಂದ ಬಂತು? ಒಂದೇ ವಿಶೇಷ ಕ್ಯಾಬಿನೆಟ್ ನಲ್ಲಿ 11770 ಕೋಟಿ ಕಾಮಗಾರಿಗೆ ಅನುಮೋದನೆ ಕೊಟ್ವಲ್ಲಾ, ಇದೆಲ್ಲಾ ಹೇಗಾಯ್ತು ಹೇಳ್ರಪಾ ಎಂದು ವ್ಯಂಗ್ಯವಾಗಿ BJP ಯನ್ನು ಪ್ರಶ್ನಿಸಿದರು. 
 
ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 371 ಜೆ ಜಾರಿಗೆ ಆಗ್ರಹಿಸಿ ಹೋರಾಟ ಸಂಘಟಿಸಿದ ಎಲ್ಲಾ ಜಾತಿ, ಧರ್ಮಗಳ ಹಿರಿಯ ಹೋರಾಟಗಾರರನ್ನು ಇದೇ ದಸರಾ ವೇದಿಕೆಯಲ್ಲಿ ಸನ್ಮಾನಿಸಿದ ಬಳಿಕ 371 ಜೆ ಸೃಷ್ಟಿಸಿದ ಅವಕಾಶದಲ್ಲಿ ಪ್ರಮುಖ ಹುದ್ದೆಗಳನ್ನು ಪಡೆದುಕೊಂಡ ಸಿಂಧನೂರಿನ 10 ಮಂದಿಯನ್ನು ಸನ್ಮಾನಿಸಲಾಯಿತು. 
 
ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಅಧ್ಯಕ್ಷತೆ ವಹಿಸಿದ್ದ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಬೋಸರಾಜು ಸೇರಿ ಕೊಪ್ಪಳ‌ ಮತ್ತು ರಾಯಚೂರು ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮುಖಂಡರುಗಳು ಉಪಸ್ಥಿತರಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ರಾತ್ರಿ ಮಳೆ: ಇನ್ನೆಷ್ಟು ದಿನದವರೆಗಿದೆ ಮಳೆ ಇಲ್ಲಿದೆ ಡೀಟೈಲ್ಸ್