Select Your Language

Notifications

webdunia
webdunia
webdunia
webdunia

ದಸರಾ ಭಾಷಣದಲ್ಲೂ ರಾಜಕೀಯ: ಸಿದ್ದರಾಮಯ್ಯ ಜನತೆಗೆ ಅಪಮಾನ ಮಾಡಿದ್ದಾರೆಂದು ಆರೋಪ

Chalavadi Narayanaswamy

Krishnaveni K

ಬೆಂಗಳೂರು , ಶುಕ್ರವಾರ, 4 ಅಕ್ಟೋಬರ್ 2024 (14:34 IST)
ಬೆಂಗಳೂರು: ಮೈಸೂರು ದಸರಾ ಉದ್ಘಾಟನೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೇವಲ ಮುಡಾ ವಿಚಾರದ ಜಪ ಮಾಡುತ್ತ ತಾವು ಮಾಡಿದ ತಪ್ಪುಗಳನ್ನು ಇಲ್ಲ, ಇಲ್ಲ ಎಂಬ ರೀತಿ ಭಾಷಣ ಮಾಡಿದ್ದಾರೆ. ಜೊತೆಯಲ್ಲಿ ಇರುವವರನ್ನು ಪ್ರೇರೇಪಿಸಿ ಸರ್ಟಿಫಿಕೇಟ್ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. ಇದು ರಾಜ್ಯದ ಜನತೆಗೆ ಮಾಡಿದ ಅಪಮಾನ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು. 

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಇದೊಂದು ನಾಚಿಕೆಗೇಡಿನ ಸಂಗತಿ. ಇಂಥ ವೇದಿಕೆಗಳನ್ನು ತಮ್ಮ ರಾಜಕೀಯ ತೆವಲನ್ನು ತೀರಿಸಿಕೊಳ್ಳಲು ಬಳಸಿಕೊಳ್ಳಬಾರದು. ರಾಜ್ಯ- ಕನ್ನಡಕ್ಕೆ ಕೊಡುಗೆ ಕೊಟ್ಟ ಮುತ್ಸದ್ಧಿಗಳಿಂದ ದಸರಾ ಉತ್ಸವ ಉದ್ಘಾಟಿಸಬೇಕು ಎಂದು ಆಗ್ರಹಿಸಿದರು. ದಸರಾ ಸಡಗರ ನಿನ್ನೆಯಿಂದ ಪ್ರಾರಂಭವಾಗಿದೆ. ಮೈಸೂರಿನ ವೈಭವ, ಮೈಸೂರು ರಾಜರ ಕೊಡುಗೆ, ರಾಜ್ಯದ ಇತಿಹಾಸ ಸ್ಮರಣೆ, ಚಾಮುಂಡಿ ತಾಯಿಯ ವಿಚಾರ ಸ್ಮರಿಸಬೇಕಿತ್ತು ಎಂದು ಅವರು ನುಡಿದರು.
ಕಾಂಗ್ರೆಸ್ಸಿನ ಪ್ರಮುಖರಾದ ಪರಮೇಶ್ವರ್, ಕೃಷ್ಣಬೈರೇಗೌಡ, ಸತೀಶ್ ಜಾರಕಿಹೊಳಿ, ಎಚ್.ಕೆ.ಪಾಟೀಲ ಅವರು ಪತ್ರಿಕಾಗೋಷ್ಠಿ ಮಾಡಿದ್ದರು. ಅವರು ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ ಎಂದು ಆರೋಪಿಸಿದರು. ಆರ್.ಅಶೋಕ್ ಅವರು ವಿಪಕ್ಷ ನಾಯಕರಾಗಿದ್ದು, ಹಿಂದೆ ಆದ ಘಟನೆಯನ್ನು ತೆಗೆದು ಅವರು ರಾಜೀನಾಮೆ ಕೊಡಲಿ ಎಂದು ಹೇಳಿದ್ದಾರೆ. ಸತ್ತು ಹೋದ ಕಥೆಯನ್ನು ತೆಗೆದು ಏನು ರಾಜೀನಾಮೆ ಕೇಳುತ್ತೀರಿ? ಮುಡಾ ಕೇಸಿಗೂ ಈ ಮುಗಿದು ಹೋದ ಕಥೆಗೂ ನೀವು ತಾಳೆ ಹಾಕುತ್ತಿದ್ದೀರಿ ಎಂದು ಟೀಕಿಸಿದರು. ಇಷ್ಟು ದೊಡ್ಡ ನಾಯಕರಾಗಿ ನಿಮಗೆ ಇದರ ಅರಿವಾಗಲಿಲ್ಲವೇ ಎಂದು ಕೇಳಿದರು.
ಇದು ಸರಿಯಾದ ರೀತಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದ ಅವರು, ಮುಡಾ ಕೇಸಿನಲ್ಲಿ ತನಿಖೆಗೆ ಎರಡು ಕೋರ್ಟ್‍ಗಳ ಆದೇಶ ಆಗಿದೆ. ಇ.ಡಿ. ಈಗಾಗಲೇ ಅದರಲ್ಲಿ ಎಂಟ್ರಿ ಆಗಿದೆ. ನೀವು ಸೈಟ್‍ಗಳನ್ನು ವಾಪಸ್ ಕೊಟ್ಟರೂ ಒಂದೇ; ಕೊಡದಿದ್ದರೂ ಒಂದೇ. ಮುಡಾದವರು ಈ ಸೈಟ್‍ಗಳನ್ನು ವಾಪಸ್ ಪಡೆಯಬಾರದಿತ್ತು ಎಂದು ತಿಳಿಸಿದರು. ಕೋರ್ಟಿನಲ್ಲಿರುವಾಗ ಮುಡಾ ಮಾಡಿರುವುದು ಕೂಡ ತಪ್ಪೇ ಆಗಿದೆ ಎಂದರು.

ಆರ್.ಅಶೋಕ್ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ. ಮುಡಾ ವಿಚಾರದಲ್ಲಿ ತನಿಖೆ ಆಗಲಿದೆ. ಮುಖ್ಯಮಂತ್ರಿಗಳು ಇದರಲ್ಲಿ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ವಿಶ್ಲೇಷಿಸಿದರು. ಎಚ್‍ಡಿಕೆ ವಿರುದ್ಧ ಕೇಸಿನ ಕುರಿತು ಮಾತನಾಡಿದ ಅವರು, ಇದು ಕಾಂಗ್ರೆಸ್ ಸಂಸ್ಕøತಿ. ಖೆಡ್ಡಾ ತೋಡಿ ಕೆಲವರನ್ನು ಹಳ್ಳಕ್ಕೆ ಬೀಳಿಸುವ ಕೆಲಸ ಪ್ರಾರಂಭ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.
ಬಿಜೆಪಿ- ಜೆಡಿಎಸ್ ಅಂದರೆ ಎನ್‍ಡಿಎ ಮಿತ್ರಕೂಟದ ಮೇಲೆ ಆರೋಪ ಹೊರಿಸಲು ಕಾಂಗ್ರೆಸ್ಸಿನಲ್ಲಿ ಒಂದು ಪಡೆಯೇ ಸಿದ್ಧವಾಗಿದೆ. ಎರಡೂ ಪಕ್ಷದ ಮುಖಂಡರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.

ದಿನೇಶ್ ಗುಂಡೂರಾವ್ ಅವರು ವೀರ ಸಾವರ್ಕರ್ ಅವರ ಕುರಿತು ಮಾತನಾಡಿ ಸಾವರ್ಕರ್ ಅವರು ಬೀಫ್ ತಿನ್ನುತ್ತಿದ್ದರು ಎಂದಿದ್ದಾರೆ. ದಿನೇಶ್ ಗುಂಡೂರಾಯರೇ ನೀವು ಬೀಫ್ ತಿನ್ನುತ್ತೀರೆಂದು ಹೀಗೆ ಹೇಳಿದ್ದು ಸರಿಯೇ? ಅವರು ದೇಶ ಮೆಚ್ಚಿದ ಶಕ್ತಿ. ಅಂಥ ವ್ಯಕ್ತಿತ್ವದ ಬಗ್ಗೆ ಮಾತನಾಡಲು ನಿಮಗೆ ಯಾವ ಯೋಗ್ಯತೆ ಇದೆ ಎಂದು ಪ್ರಶ್ನಿಸಿದರು. ನೀವು ನಿಮ್ಮ ಇತಿಮಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು ತಿಳಿಸಿದರು.

ಅವರು ಮಾಂಸಾಹಾರಿ, ಬೀಫ್ ತಿನ್ನುತ್ತಿದ್ದರೆಂದು ಯಾವ ಚರಿತ್ರೆಯಲ್ಲಿ ನೀವು ಓದಿದ್ದೀರಿ? ನಿಮ್ಮ ಬಗ್ಗೆ ಎಲ್ಲರಿಗೂ ಗೊತ್ತಿದೆ. ನೀವೇನು? ನಿಮ್ಮ ಚರಿತ್ರೆ ಏನು? ಎಂದು ಎಲ್ಲರಿಗೂ ಗೊತ್ತಿದೆ. ನೀವು ಶಿವಾಜಿನಗರದಲ್ಲಿ ಎಲ್ಲೆಲ್ಲಿ ಏನೇನು ತಿನ್ನುತ್ತೀರೆಂದು ಇಡೀ ಶಿವಾಜಿನಗರ ಹೇಳುತ್ತದೆ. ಬೀಫ್ ಎಲ್ಲಿ, ಮತ್ತೊಂದು ಎಲ್ಲಿ ತಿನ್ನುತ್ತೀರೆಂದು ಎಲ್ಲ ಗೊತ್ತಿದೆ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿಗಳ ಕ್ಷೇತ್ರದಲ್ಲೇ ದಲಿತರಿಗೆ ದೇವಾಲಯ ಪ್ರವೇಶವನ್ನು ತಡೆಯಲಾಗಿದೆ. ಕಾಂಗ್ರೆಸ್ಸಿಗರು ದಲಿತರ ಕುರಿತು ಮೊಸಳೆಕಣ್ಣೀರು ಸುರಿಸುತ್ತಾರೆ. ಡಿಸಿಎಂಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಅವರೇ ನಿಂತು ದಲಿತÀರನ್ನು ದೇಗುಲ ಪ್ರವೇಶ ಮಾಡಿಸಬೇಕು; ಶಾಂತಿ ಸಭೆ ಮಾಡಿಸಿ ಬಾಬಾ ಸಾಹೇಬರ ಸಂವಿಧಾನದಂತೆ ನ್ಯಾಯ ಕೊಡಿಸಬೇಕು. ಇಲ್ಲವಾದರೆ ನಿಮ್ಮ ದಲಿತ ಪ್ರೀತಿಗೆ ಜನರು ಛೀಮಾರಿ ಹಾಕುತ್ತಾರೆ ಎಂದು ಎಚ್ಚರಿಸಿದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ತಿರುಪತಿ ಲಡ್ಡು ವಿವಾದ: ರಾಜಕೀಯ ನಾಟಕ ನೋಡಲಾಗುತ್ತಿಲ್ಲ ಎಂದ ಸುಪ್ರೀಂಕೋರ್ಟ್