ಬೆಂಗಳೂರು: ಕರ್ನಾಟಕದಲ್ಲಿ ಹಲವೆಡೆ ಮಳೆಯ ಅಬ್ಬರ ಮುಂದುವರಿದಿದ್ದು ಕರಾವಳಿ, ಒಳನಾಡು ಸೇರಿದಂತೆ ಹಲವೆಡೆ ಅಲ್ಲಲ್ಲಿ ಮಳೆಯಾಗುತ್ತಲೇ ಇದೆ. ಮಳೆಯ ಲೇಟೆಸ್ಟ್ ಅಪ್ ಡೇಟ್ ಇಲ್ಲಿದೆ.
ನಿನ್ನೆ ರಾತ್ರಿಯಿಡೀ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಸುರಿದಿತ್ತು. ರಾಜ್ಯದ ವಿವಿಧ ಭಾಗದಲ್ಲಿ ನಿನ್ನೆ ಸಂಜೆಯಿಂದಲೇ ಮಳೆ ಆರಂಭವಾಗಿದೆ. ಈಗಾಗಲೇ ಹವಾಮಾನ ಇಲಾಖೆ 17 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಿತ್ತು. ಇಂದೂ ಕೂಡಾ ಮಳೆಯಾಗುವ ನಿರೀಕ್ಷೆಯಿದೆ.
ನಿನ್ನೆ ಸಂಜೆಯಿಂದ ಜಯನಗರ, ಮೆಜೆಸ್ಟಿಕ್ ಮುಂತಾದೆಡೆ ಗುಡುಗು ಸಹಿತ ಮಳೆಯಾಗಿತ್ತು. ಕೆಆರ್ ಪುರಂ, ಹೆಬ್ಬಾಳ ಮುಂತಾದೆಡೆ ರಾತ್ರಿ ಮಳೆಯಾಗಿತ್ತು. ಭಾರೀ ಮಳೆಯಿಂದಾಗಿ ಸಹಜವಾಗಿ ಬೆಂಗಳೂರಿನಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆದರೆ ಇದೀಗ ಬೆಳಿಗ್ಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳವರೆಗೆ ಇದೇ ವಾತಾವರಣವಿರಲಿದ್ದು, ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಇಂದೂ ಕೂಡಾ ರಾತ್ರಿ ಮಳೆ ಸಾಧ್ಯತೆಯಿದ್ದು, ನಾಳೆಯವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.